ಅಂಬೇಡ್ಕರ್ ಯುವಸೇನೆಯಿಂದ ದೇವದಾಸ್‌ಗೆ ನುಡಿನಮನ

Update: 2026-08-13 21:38 IST

ಮಲ್ಪೆ, ಆ.13: ಕರಾವಳಿಯಲ್ಲಿ ದಲಿತ ಚಳವಳಿಗೆ ಆಸ್ತಿವಾರ ಹಾಕಿದ, ಬಡವರ ಗುಡಿಸಿಲಿನಲ್ಲಿ ಅರಿವಿನ ಅಂಕುರ ಕ್ಕಾಗಿ ಸತತ ಶ್ರಮಿಸಿ ಇತ್ತೀಚೆಗೆ ನಿಧನರಾದ ಮಂಗಳೂರಿನ ಹಿರಿಯ ದಲಿತ ಮುಖಂಡ ಎಂ ದೇವದಾಸ್‌ರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.

ಮಲ್ಪೆಯ ಸರಸ್ವತಿ ಬಯಲುರಂಗ ಮಂದಿರದಲ್ಲಿ ಗುರುವಾರ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ ದಲಿತರು ಸ್ವಾಭಿಮಾನಿಗಳಾಗಬೇಕು, ಸ್ವಾವಲಂಬಿಗಳಾಗಬೇಕು, ಶಿಕ್ಞಣ, ಸಂಘಟನೆ, ಹೋರಾಟದ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು, ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಸರ್ವತ್ಯಾಗಕ್ಕೂ ಸಿದ್ಧರಿರಬೇಕೆಂದು ದೇವದಾಸ್ ಪ್ರಾಮಾಣಿಕವಾಗಿ ಶ್ರಮಿಸಿದರು ಎಂದರು.

ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಒಬ್ಬ ದಿಟ್ಟ ಹಾಗೂ ಪ್ರಖರ ವೈಚಾರಿಕತೆ, ಸಂಪ್ರದಾಯ ವಿರೋಧಿ ಮನೋಭಾವ, ಆಧುನಿಕ ದೃಷ್ಟಿಕೋನಗಳಿಂದ ದೇವದಾಸ್ ಹೆಸರಾದವರು. ಅಂಬೇಡ್ಕರ್ ಹಾದಿಯಲ್ಲಿ ನಿಷ್ಟೆಯಿಂದ ದುಡಿದ ಕಡಲತೀರದ ಅಪರೂಪದ ವ್ಯಕ್ತಿ ಎಂದರು.

ಹಿರಿಯ ದಲಿತ ಮುಖಂಡ ಕರುಣಾಕರ ಮಾಸ್ತರ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕರ್ನಾಟಕ ರಾಜ್ಯ ಎಸ್‌ಸಿ-ಎಸ್‌ಟಿ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಯು.ಪರಮೇಶ್ವರ ಮತ್ತು ದಲಿತ ಮುಖಂಡ ಹರೀಶ್ ಸಲ್ಯಾನ್ ಅಗಲಿದ ದಲಿತ ಮುಖಂಡ ಎಂ ದೇವದಾಸರಿಗೆ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ದಯಾಕರ ಮಲ್ಪೆ ನಾರಾಯಣ ಪರ್ಕಳ, ಶಿವಣ್ಣ, ರವಿರಾಜ್ ಲಕ್ಷ್ಮೀನಗರ, ಗುಣವಂತ ತೊಟ್ಟಂ, ಪ್ರಸಾದ್ ಮಲ್ಪೆ, ಅರುಣ ಸಲ್ಯಾನ್, ಶ್ರೀನಾಥ್ ಚಿಟ್ಪಾಡಿ, ಹರೀಶ್ ಅಮೀನ್ ತೊಟ್ಟಂ, ಫಜೀಲ್, ಬಿ.ಎನ್.ಪ್ರಶಾಂತ್, ಸುಶೀಲ್ ಕುಮಾರ್ ಕೊಡವೂರು ಮುಂತಾದವರು ಉಪಸ್ಥಿತರಿದ್ದರು.

ಸುಕೇಶ್ ನಿಟ್ಟೂರು ಸ್ವಾಗತಿಸಿ ಅಶೋಕ್ ಪುತ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News