ಪುನೀತ್ ಅತ್ತಾವರ, ನರಸಿಂಹ ಮಾಣಿಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ 3 ತಿಂಗಳು ನಿಷೇಧ

Update: 2026-08-13 21:21 IST

ಪುನೀತ್ ಅತ್ತಾವರ

ಉಡುಪಿ, ಆ.13: ಇಂದಿನಿಂದ ನವೆಂಬರ್ 13ರವರೆಗೆ ಒಟ್ಟು ಮೂರು ತಿಂಗಳ ಕಾಲ ಮಂಗಳೂರಿನ ಬಜರಂಗ ದಳದ ಮುಖಂಡ ಪುನೀತ್ ಅತ್ತಾವರ (39) ಹಾಗೂ ಹಿಂದೂ ಜಾಗರಣ ವೇದಿಕೆಯ ನರಸಿಂಹ ಮಾಣಿ (44) ಉಡುಪಿ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶವನ್ನು ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಂಗಳೂರಿನ ಅತ್ತಾವರ ನಿವಾಸಿ ಪುನೀತ್ ಅತ್ತಾವರ ಹಾಗೂ ನರಸಿಂಗ ಮಾಣಿ ನವೆಂಬರ್ 13ರವರೆಗೆ ಉಡುಪಿ ಜಿಲ್ಲಾ ಪ್ರವೇಶವನ್ನು ನಿಷೇಧಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಮಂಗಳೂರು ವಿಭಾಗ ಸಂಚಾಲಕರಾದ ಪುನೀತ್ ಅತ್ತಾವರ ನಾಳೆ ಶಿರ್ವದಲ್ಲಿ ನಡೆಯುವ ಅಖಂಡ ಭಾರತ ಪಂಜಿನ ಮೆರವಣಿಗೆಯಲ್ಲಿ ದಿಕ್ಸೂಚಿ ಭಾಷಣಕಾರನಾಗಿದ್ದರೆ, ನರಸಿಂಹ ಮಾಣಿ ಹಿಂದೂ ಜಾಗರಣ ವೇದಿಕೆ ಬೆಳ್ಮಣ್ ವಲಯ ಇಂದು ಆಯೋಜಿಸಿದ್ದ ಅಖಂಡ ಭಾರತ ಪಂಜಿನ ಮೆರವಣಿಗೆಯಲ್ಲಿ ದಿಕ್ಸೂಚಿ ಭಾಷಣಕಾರನಾಗಿ ಭಾಗವಹಿಸುವ ಕಾರ್ಯಕ್ರಮವಿತ್ತು.

ಪುನೀತ್ ಅತ್ತಾವರ ಪದೇ ಪದೇ ಒಂದು ವರ್ಗದ ಜನರ ಧಾರ್ಮಿಕ, ಮತೀಯ ನಂಬಿಕೆಗಳಿಗೆ ಅಪಮಾನಗೊಳಿಸಿ ಧಕ್ಕೆಯನ್ನುಂಟು ಮಾಡುವ, ಪ್ರಚೋದನಕಾರಿಯಾಗಿ ಭಾಷಣ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಹಿನ್ನಲೆ ಯವನಾಗಿದ್ದು, ಆತನ ವಿರುದ್ಧ 2008ರಿಂದ ಮಂಗಳೂರು ಗ್ರಾಮಾಂತರ, ಮಂಗಳೂರು ಉತ್ತರ, ಬರ್ಕೆ, ಮಂಗಳೂರು ಗ್ರಾಮಾಂತರ, ಕಂಕನಾಡಿ, ಕಾರ್ಕಳ ನಗರ ಹಾಗೂ ಮಂಗಳೂರು ನಗರ ಸೆನ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ರೌಡಿ ಶೀಟರ್ ಆಗಿರುವ ನರಸಿಂಹ ಮಾಣಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಈತನ ವಿರುದ್ಧ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ವಿಟ್ಲ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಗದ ಜನರ ಧಾರ್ಮಿಕ ಹಾಗೂ ಮತೀಯ ನಂಬಿಕೆಗಳಿಗೆ ಅಪಮಾನಗೊಳಿಸಿ ಧಕ್ಕೆಯನ್ನುಂಟು ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದಾನೆ. ಈತನ ಹಿನ್ನೆಲೆ ಪರಿಶೀಲಿಸಿದಾಗ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಸಮಾಜದ ಸ್ವಾಸ್ಥ ಕೆಡಿಸುವ ಮನೋಭಾವ ಕಂಡುಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆ ಕೋಮು ದೃಷ್ಟಿಯಿಂದ ಮೊದಲಿನಿಂದಲೂ ಅತೀ ಸೂಕ್ಷ್ಯ ಜಿಲ್ಲೆ ಎಂದು ಗುರುತಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮುಂದಿನ ಮೂರು ತಿಂಗಳುಗಳಲ್ಲಿ ಗಣೇಶ ಚತುರ್ಥಿ, ಕೃಷ್ಮ ಜನ್ಮಾಷ್ಟಮಿ ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ತಡೆಯುವ ಉದ್ದೇಶದಿಂದ ಉಡುಪಿ ಜಿಲ್ಲೆಗೆ ಇವರ ಪ್ರವೇಶ ವನ್ನು ನಿರ್ಬಂಧಿಸುವ ಆದೇಶವನ್ನು ಹೊರಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿಕೊಂಡಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಎಚ್‌ಪಿ-ಬಜರಂಗದಳ ಖಂಡನೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಕಾರ್ಯಕ್ರಮ ಗಳಿಗೆ ಆಗಮಿಸಬೇಕಾಗಿದ್ದ ಸಂಘ ಪರಿವಾರದ ಸಂಘಟನೆಗಳ ಮುಖಂಡರಿಗೆ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಉಡುಪಿ ಜಿಲ್ಲಾ ಘಟಕಗಳು ಖಂಡಿಸಿವೆ.

ಪುನೀತ್ ಅತ್ತಾವರ ಹಾಗೂ ನರಸಿಂಹ ಮಾಣಿ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರಾಕರಿಸಿರುವುದು ಸರಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆರೋಪಿಸಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಚಾಲಕ ಮಹೇಶ್ ಕಡಗದಾಳು ಅವರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News