ಕೋಟೇಶ್ವರ ಒಳಪೇಟೆಯಲ್ಲಿ ಸರಕಾರಿ ಭೂಮಿ ಒತ್ತುವರಿ: ಕಂದಾಯ ಇಲಾಖೆಯಿಂದ ಸರ್ವೇ, ಗಡಿಗುರುತು ಕಾರ್ಯ
ಕುಂದಾಪುರ : ತಾಲೂಕಿನ ಬೆಳೆಯುತ್ತಿರುವ ನಗರಗಳಪೈಕಿ ಪ್ರಮುಖ ವಾದ ಕೋಟೇಶ್ವರದಲ್ಲಿನ ಒಳಪೇಟೆ ರಸ್ತೆಯುದ್ದಕ್ಕೂ ಇರುವ ಬಹುತೇಕ ಸರಕಾರಿ ಭೂಮಿ ಅತಿಕ್ರಮಣದ ವಿರುದ್ಧ ನಾಗರಿಕರು ಕಳೆದ ಎರಡೂವರೆ ದಶಕಗಳಿಂದ ನಡೆಸುತ್ತಿದ್ದ ಹೋರಾಟದ ಫಲವಾಗಿ ಕಂದಾಯ ಇಲಾಖೆಯ ಸಮಕ್ಷಮ ಜಂಟಿ ಸರ್ವೆಗೆ ಗುರುವಾರ ಚಾಲನೆ ನೀಡಲಾಯಿತು.
ಕಳೆದ ಎರಡೂವರೆ ದಶಕಗಳಿಂದ ನಾಗರಿಕರು ನಡೆಸುತ್ತಿದ್ದ ಹೋರಾಟಕ್ಕೆ ಆರಂಭದ ಜಯ ಇದಾಗಿದ್ದು ಕಂದಾಯ, ಲೋಕೋಪಯೋಗಿ ಇಲಾಖೆ ಯಿಂದ ಕೋಟೇಶ್ವರ, ಬೀಜಾಡಿ ಹಾಗೂ ಗೋಪಾಡಿ ಗ್ರಾಪಂ ವ್ಯಾಪ್ತಿ ಗೊಳಪಡುವ ಕೋಟೇಶ್ವರ ಒಳಪೇಟೆ ರಸ್ತೆಯಲ್ಲಿ ಜಂಟಿ ಸರ್ವೆ ಕಾರ್ಯ ನಡೆಸುವ ಕಾರ್ಯ ನಡೆಯುತ್ತಿದೆ.
ಗುರುವಾರ ಮಧ್ಯಾಹ್ನ ಸರ್ವೆಗೆ ಕೆಲವೇ ಸಿಬ್ಬಂದಿಗಳು ಬಂದಿದ್ದು ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ದರು. ಸ್ಥಳೀಯ ಸಂಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಸ್ಥಳದಲ್ಲಿ ನೆರೆದ ನಾಗರಿಕರಿಂದ ಅಸಹನೆ ವ್ಯಕ್ತವಾಯಿತು. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಶೀಘ್ರ ಸರ್ವೆ ಕಾರ್ಯ ಮುಗಿಸಿ, ಸಮಸ್ಯೆಗೆ ಶಾಶ್ವತ ಪರಿಹಾರವಾಗಬೇಕು ಎಂಬ ಒತ್ತಾಯದ ಬಳಿಕ ಸರ್ವೆಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭ ಪ್ರಮುಖರಾದ ಗಣೇಶ್ ಪುತ್ರನ್, ರಾಜು ಬೆಟ್ಟಿನಮನೆ, ಅಶೋಕ್ ಪೂಜಾರಿ ಬೀಜಾಡಿ, ನಾರಾಯಣ ಪೇಂಟರ್, ಪ್ರಕಾಶ್ ಪೂಜಾರಿ ಬೀಜಾಡಿ, ಲೋಕೇಶ್ ಅಂಕದಕಟ್ಟೆ, ಶೇಖರ ಮಠದಬೆಟ್ಟು, ಶ್ರೀಧರ ಬಂಡಿಕಡು, ಅಣ್ಣಪ್ಪ ಬೆಟ್ಟಿನಮನೆ, ಗುರು ಇಂಜಿನಿರ್ಯ, ಗಣೇಶ ಮೇಸ್ತ್ರೀ, ಬಾಬಣ್ಣ, ಸ್ಥಳೀಯ ರಿಕ್ಷಾ, ವಾಹನ ಚಾಲಕರು, ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ರಾಮು ಹೊದ್ಲೂರು, ಕಂದಾಯ ಇಲಾಖೆಯ ನಿರೀಕ್ಷಕ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
‘ಸಾರ್ವಜನಿಕರ ಸಮಸ್ಯೆಯಾದ ಹಿನ್ನೆಲೆಯಲ್ಲಿ ಕೋಟೇಶ್ವರದಲ್ಲಿ ಸರಕಾರಿ ಭೂಮಿ ಅತಿಕ್ರಮಣದ ಬಗ್ಗೆ 25 ವರ್ಷಗಳ ಹಿಂದಿನಿಂದ ನಿರಂತರ ಹೋರಾಟ ಮಾಡಲಾಗಿದೆ. ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಜಾಣಕುರುಡು ಈ ಸಮಸ್ಯೆಗೆ ಕಾರಣ. ಒಂದೇ ಭಾಗದಿಂದ ಸರ್ವೆ ನಡೆಸಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಒದಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ.
-ಗಣೇಶ್ ಪುತ್ರನ್, ಸಾಮಾಜಿಕ ಕಾರ್ಯಕರ್ತ.
‘ಸರಕಾರಿ ಭೂಮಿ ಒತ್ತುವರಿಯಾದ ಬಗ್ಗೆ ಈಗಾಗಲೇ ಮನವಿ ಮಾಡಿ ಗಡಿ ಗುರುತು ಮಾಡಲು ಈ ಹಿಂದೆ ಮನವಿ ಮಾಡಲಾಗಿತ್ತು. ಕಾಟಾಚಾರದ ಸರ್ವೆ ಕೆಲಸ ಆಗಬಾರದು. ಸರಕಾರಿ ಭೂಮಿ, ಲೋಕೋಪಯೋಗಿ ಇಲಾಖೆ ಗೊಳಪಡುವ ರಸ್ತೆ ಜಾಗದ ಅಳತೆ ನಡೆಸಿ ಗುರುತು ಮಾಡಬೇಕು. ಸರಕಾರಿ ಭೂಮಿ ಅತಿಕ್ರಮಣದ ಬಗ್ಗೆ ಸಂಬಂದಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ ಎನ್ನುವಂತೆ ಆಗಬಾರದು. ಒತ್ತುವರಿ, ವಿದ್ಯುತ್ ಸಂಪರ್ಕ ನೀಡಿದ್ದು, ಇದಕ್ಕೆ ಮೂರು ಪಂಚಾಯತಿಗಳು ಜವಾಬ್ದಾರಿಯಾಗಿವೆ.
-ಕೆ.ಸಿ. ರಾಜು ಬೆಟ್ಟಿನಮನೆ, ದಲಿತ ಮುಖಂಡರು.
‘ಕೋಟೇಶ್ವರದ ಒಳಪೇಟೆ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ಕೂಡ ರಸ್ತೆಯು ಕಿರಿದಾಗಿದ್ದು ಇಕ್ಕೆಲಗಳಲ್ಲಿ ಒತ್ತುವರಿಯಾದ ಜಾಗದಲ್ಲಿ ಅಂಗಡಿಗಳು, ಅದಕ್ಕೆ ಅಳವಡಿಸಿದ ಮಾಡುಗಳು, ಗೂಡಂಗಡಿಗಳು ವಾಹನ ಗಳ ಸುಗಮ ಸಂಚಾರಕ್ಕೆ ತೊಂದರೆಯುಂಟು ಮಾಡುತ್ತಿವೆ. ಪ್ರಮುಖ ಪೇಟೆ ಯಾದರೂ ಕೂಡ ಒಳಕ್ಕೆ ಬರಲು ಖಾಸಗಿ ಬಸ್ಸಿನವರು ಹಿಂದೇಟು ಹಾಕುವಂತಾಗಿದೆ. ವಾಹನ ದಟ್ಟಣೆ, ಕಿರುರಸ್ತೆ ಕಾರಣಕ್ಕೆ ಖಾಸಗಿ ಲಘು ವಾಹನಗಳು ಒಳಪೇಟೆಗೆ ಭಯದಿಂದ ಬರುತ್ತಿಲ್ಲ. ವ್ಯವಸ್ಥಿತ ಕೋಟೇಶ್ವರಕ್ಕೆ ನಮ್ಮ ಹೋರಾಟ ನಿರಂತರ.
-ಶೇಖರ ಮಠದಬೆಟ್ಟು. ಕೋಟೇಶ್ವರ ರಿಕ್ಷಾ ಚಾಲಕರು.