×
Ad

ಬ್ರಹ್ಮಾವರ: ಹೆಗ್ಗುಂಜೆ ಮನೆ ತೆರವು ಪ್ರಕರಣ; ಪ್ರತಿಭಟನೆ

Update: 2026-01-13 19:50 IST

ಬ್ರಹ್ಮಾವರ, ಜ.13: ಕುಡುಬಿ ಸಮಾಜ ಕಷ್ಟದಿಂದ ಬದುಕು ಸಾಗಿಸುವ ಮುಗ್ಧ ಸಮಾಜ. ಅವರು ನಿರ್ಮಿಸಿಕೊಂಡ ಮನೆಯನ್ನು ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿದ್ದು ಖೇಧಕರ. ಶಾಸಕಾಂಗ ಮತ್ತು ಕಾರ್ಯಾಂಗ ಸಮನ್ವಯತೆಯಿಂದ ಸಾಗಬೇಕು ಎಂದು ಸ್ಥಳೀಯ ತಹಶೀಲ್ದಾರ್‌ಗೆಗೆ ಹಲವು ಬಾರಿ ಹೇಳಿದ್ದರೂ ಅವರು ಸುಧಾರಣೆಯಾಗುತ್ತಿಲ್ಲ. ಜನರಿಗೆ ತೊಂದರೆ ಕೊಡುವ ತಹಶೀಲ್ದಾರ್ ವಿರುದ್ಧ ಮುಂದೆಯೂ ಹೋರಾಟ ಮಾಡುವುದಾಗಿ ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದ್ದಾರೆ.

ಹೆಗ್ಗುಂಜೆ ಗ್ರಾಮದ ಸರಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ್ತವ್ಯವಿದ್ದ ಐದು ಬಡ ಕುಟುಂಬಗಳ ಮನೆ ತೆರವು ಮಾಡಿದ ಬ್ರಹ್ಮಾವರ ತಹಶೀಲ್ದಾರ್ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ಬ್ರಹ್ಮಾವರ ತಾಲೂಕು ಆಡಳಿತ ಕೇಂದ್ರದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮನೆ ಕಳೆದುಕೊಂಡ ಸಂತ್ರಸ್ತರಿಗೆ ಜಾಗ ಒದಗಿಸಿಕೊಟ್ಟು,ಮನೆ ಮಂಜೂರು ಮಾಡುವ ಮೂಲಕ ಸರಕಾರ ನ್ಯಾಯ ಒದಗಿಸಬೇಕು. ಜನರಿಗೆ ಅನುಕೂಲ ವಾಗುವ ಕೆಲಸ ಇವರು ಮಾಡುತ್ತಿಲ್ಲ. ಎಷ್ಟೋ ವರ್ಷಗಳ ಹಿಂದಿನ ಅಕ್ರಮ-ಸಕ್ರಮ ಕಡತಗಳಿಗೆ ತೊಂದರೆ ಕೊಡುತಿದ್ದಾರೆ ಎಂದು ತಾಲೂಕು ಕಚೇರಿಯ ಕೆಲ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರಿಗೆ ಅನುಕೂಲ ವಾಗಲು ಕಲ್ಪಿಸಿದ ತಾಲೂಕು ಕಚೇರಿ ಎದುರಿಗೆ ಜನರಿಗಾದ ಸಂಕಷ್ಟದ ಬಗ್ಗೆ ಜನಪ್ರತಿನಿಧಿಗಳು ಧರಣಿ ಕೂರಬೇಕಾದ ದುಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ 48 ಸಾವಿರ ಮಂದಿ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು 94ಸಿ, 94 ಸಿಸಿ ಅಡಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ 9 ಸಾವಿರ ಮಂದಿಗೆ ಮಾತ್ರವೇ ಹಕ್ಕುಪತ್ರ ಸಿಕ್ಕಿದೆ. ಉಳಿದವರ ಕಥೆಯೇನು? ಎಂದು ಪ್ರಶ್ನಿಸಿದರು.

ತಾಲೂಕು ಕಚೇರಿಇರುವುದು ಕಾನೂನುಬದ್ಧವಾಗಿ ಹಕ್ಕುಪತ್ರ ನೀಡುವುದಕ್ಕೆ ಹೊರತು ಜೆಸಿಬಿ ಮೂಲಕ ಮನೆ ಒಡೆದು ಹಾಕುವುದಕ್ಕಲ್ಲ. ಹೆಗ್ಗುಂಜೆ ಗ್ರಾಮದ ಕುಡುಬಿ ಸಮುದಾಯದ ಪರಿಸ್ಥಿತಿ ಬಗ್ಗೆ ಸಂಬಂದಪಟ್ಟ ಸಚಿವರು, ಡಿಸಿ, ತಹಶೀಲ್ದಾರ್‌ಗೆ ತಿಳಿಸಿ ಕಾಲವಕಾಶ ಕೋರಲಾಗಿತ್ತು. ಆದರೆ ಬೆಳ್ಳಂಬೆಳಿಗ್ಗೆ ಮನೆ ಒಡೆಯುವ ಕೆಟ್ಟ ಕೆಲಸ ಮಾಡಲಾಗಿದ್ದು ಇದಕ್ಕೆ ಯಾರು ಹೊಣೆ? ಎಂದು ಸಂಸದ ಕೋಟ ಪ್ರಶ್ನಿಸಿದರು.

ಡೀಮ್ಡ್, ಕುಮ್ಕಿ ಸಮಸ್ಯೆ ಪರಿಹಾರವಾಗಿಲ್ಲ. ಬಸವವಸತಿ ಯೋಜನೆಯಡಿ ಮನೆ ನೀಡುತ್ತಿಲ್ಲ. ಬಡವರ ಮನೆ ಒಡೆದರೆ ಯಾರಿಗೂ ಗೌರವವಲ್ಲ. ಮನೆ ಕಟ್ಟಿಸಿ ಕೊಟ್ಟರೆ ಸರಕಾರಕ್ಕೆ ಗೌರವ ಎಂಬುದನ್ನು ಕಂದಾಯ ಮಂತ್ರಿಗಳು ಗಮನಿಸಬೇಕು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಕುಡುಬಿ ಸಮಾಜದ ಜಿಲ್ಲಾಧ್ಯಕ್ಷ ಪ್ರಭಾಕರ ನಾಯ್ಕ್ ಮಾತನಾಡಿ, ಬಡ ಮನೆಯವರ ಪರಿಸ್ಥಿತಿ ಲೆಕ್ಕಿಸದೆ ಕಾರ್ಯಾಂಗ ವ್ಯವಸ್ಥೆಯು ನಡೆಸಿದ ದಬ್ಬಾಳಿಕೆ ಸರಿಯಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಸರಕಾರಿ ಧೋರಣೆಯ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಕುಡುಬಿ ಸಮಾಜ ಸಿದ್ಧವಿದೆ ಎಂದರು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟೆಹೊಳೆ, ಸಂತ್ರಸ್ತೆ ದೇವಕಿ ನಾಯ್ಕ್, ಜಿಲ್ಲಾ ಬಿಜೆಪಿ ನಾಯಕರಾದ ಕಾಡೂರು ಸುರೇಶ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಆರೂರು ರಾಜೀವ ಕುಲಾಲ್, ದೇವಾನಂದ ನಾಯಕ್, ಬಿರ್ತಿ ರಾಜೇಶ್ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಪ್ರತಾಪ್ ಹೆಗ್ಡೆ ಮಾರಾಳಿ, ವಿಠಲ್ ಪೂಜಾರಿ, ಕುಡುಬಿ ಯುವ ಸಂಘದ ವಿಘ್ನೇಶ್ ನಾಯ್ಕ್, ಉಮೇಶ್ ನಾಯ್ಕ್, ಹೆಗ್ಗುಂಜೆ ಗುರುಪ್ರಸಾದ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮನವಿ ಸಲ್ಲಿಕೆ: ಸಂಜೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದು ಕೊಳ್ಳಲಾಯಿತು. ಮನವಿಯಲ್ಲಿ ತಹಶೀಲ್ದಾರ್ ಸೇರಿದಂತೆ ತಪ್ಪಿತಸ್ಥರ ಅಧಿಕಾರಿಗಳ ಅಮಾನತು, ಸಂತ್ರಸ್ಥರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಆಗ್ರಹ ಹಾಗೂ ಕಳೆದ ಗುರುವಾರ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಮೂವರ ವಿರುದ್ಧ ಬ್ರಹ್ಮಾವರ ಠಾಣೆಯಲಿಲ ದಾಖಲಿಸಿದ ಮೊಕದ್ದಮೆಯನ್ನು ವಾಪಾಸು ಪಡೆಯುವಂತೆ ತಿಳಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಎಡಿಸಿ ಭರವಸೆ ನೀಡಿದರು.

ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕೋಟ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News