ಬ್ರಹ್ಮಾವರ| ಫ್ಯಾಕ್ಟರಿ ನಿರ್ಮಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ, ಸೆ.13: ಕಚ್ಚಾ ಸಾಮಗ್ರಿಗಳ ಸಂಗ್ರಹಣ ಘಟಕ ನಿರ್ಮಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
52ನೇ ಹೇರೂರು ಗ್ರಾಮದ ಸುಪ್ರೀಂ ಫೀಡ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಆಡಳಿತ ನಿರ್ದೇಶಕರಾಗಿರುವ ರವಿ ಕೆ. ಕಾರ್ಖಾನೆಗೆ ಕಚ್ಚಾ ಸಾಮಗ್ರಿಗಳ ಸಂಗ್ರಹಣ ಘಟಕವನ್ನು ನಿರ್ಮಿಸುವ ಬಗ್ಗೆ ಹರಿಯಾಣದಲ್ಲಿರುವ ಬೆನ್ ಮತ್ತು ಗಾವ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ದ್ವೈಪಾಯನ್ ದತ್ತ ಸಂಪರ್ಕಿದ್ದು, ಅವರು 2023 ಮಾ.14ರ ಸರಕುದರ ಪಟ್ಟಿ ನಮೂನೆಯ ಪ್ರಕಾರ ಆಧುನಿಕ ಸಂಗ್ರಹಣ ಘಟಕವನ್ನು ಮಾಡಿಕೊಡುವುದಾಗಿ ನಂಬಿಸಿದ್ದರು.
ಅದರಂತೆ ರವಿ ಕೆ. ಆರೋಪಿತರ ಕಂಪೆನಿಗೆ 1,45,00,000ರೂ. ಹಣವನ್ನು ಮುಂಗಡವಾಗಿ ಹಾಗೂ ಹೆಚ್ಚುವರಿ ಯಾಗಿ 40,03,311ರೂ. ಹಣವನ್ನು ಪಾವತಿಸಿದ್ದರು. ಈ ಹಣವನ್ನು ಪಡೆದು ಕೊಂಡು ಈವರೆಗೂ ಆರೋಪಿತರು ಒಪ್ಪಿಕೊಂಡ ರೀತಿಯಲ್ಲಿ ಕಚ್ಚಾ ಸಾಮಗ್ರಿಗಳ ಸಂಗ್ರಹಣ ಘಟಕವನ್ನು ನಿರ್ಮಿಸಲು ವಿಫಲವಾಗಿದ್ದಾರೆ. ಆರೋಪಿತರು ರವಿ ಅವರಿಗೆ ಮೋಸ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿ, ಕಂಪೆನಿಗೆ ನಷ್ಟವುಂಟು ಮಾಡಿರುವುದಾಗಿ ದೂರಲಾಗಿದೆ. ಈ ಕೃತ್ಯಕ್ಕೆ ನೇಸರ್ ಅಲಂ, ಅಂಕುರ್ ಗುಪ್ತಾ, ಮಧು ಗುಪ್ತಾ, ಉಮೇಶ್ ರಾವತ್ ಮತ್ತು ಉಜ್ವಲ್ ಸಿಂಗ್ರವರು ಸಹಕರಿಸಿದ್ದಾರೆ ಎಂದು ದೂರಲಾಗಿದೆ.