×
Ad

ಬ್ರಹ್ಮಾವರ: ತಂದೆಯನ್ನು ಕತ್ತಿಯಲ್ಲಿ ಕಡಿದು ಕೊಲೆಗೈದ ಪುತ್ರ

Update: 2023-10-07 20:07 IST

ಸಾಧು ಮರಕಾಲ

ಬ್ರಹ್ಮಾವರ: ಕ್ಷುಲ್ಲಕ ಕಾರಣಕ್ಕಾಗಿ ಮಗ ತನ್ನ ತಂದೆಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ದಾರುಣ ಘಟನೆ ಪೆಜಮಂಗೂರು ಗ್ರಾಮದ ಮೊಗವೀರ ಪೇಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ವೇಳೆ ನಡೆದಿದೆ.

ಕೊಲೆಗೀಡಾದವರನ್ನು ಮೊಗವೀರಪೇಟೆ ನಿವಾಸಿ ಸಾಧು ಮರಕಾಲ(68) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಮೃತರ ಪುತ್ರ ಆನಂದ ಮರಕಾಲ (50) ಎಂಬಾತ ತಲೆಮರೆಸಿಕೊಂಡಿದ್ದಾನೆ.

ಸಾಧು ಮರಕಾಲ ಮೊಗವೀರಪೇಟೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಇವರ ಮಕ್ಕಳು ಇತರ ಕಡೆ ವಾಸವಾಗಿದ್ದು, ಆಗಾಗ್ಗೆ ಇಲ್ಲಿಗೆ ಬಂದು ಹೋಗುತ್ತಿದ್ದರು. ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಆನಂದ, ಮನೆಗೆ ಬಂದಾ ಗೆಲ್ಲಾ ತಂದೆ ಜೊತೆ ಗಲಾಟೆ ಮಾಡುತ್ತಿದ್ದನು ಎಂದು ದೂರಲಾಗಿದೆ.

ಶನಿವಾರ ಮನೆಗೆ ಬಂದ ಆನಂದ, ತಂದೆ ಜೊತೆ ಗಲಾಟೆ ಮಾಡಿದ್ದನು. ಈ ವೇಳೆ ಸಿಟ್ಟಿಗೆದ್ದ ಆನಂದ, ಕತ್ತಿಯಿಂದ ತಂದೆಯ ಕಾಲಿನ ಭಾಗ ಕಡಿದು ಪರಾರಿಯಾಗಿದ್ದನು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸಾಧು ಮರಕಾಲ, ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ., ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News