ಬೈಂದೂರು | ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಮರವಂತೆ ನಿಧನ
ಬೈಂದೂರು, ಜೂ.6: ಹಿರಿಯ ಪತ್ರಕರ್ತ, ಲೇಖಕ, ಪಂಚಾಯತ್ ರಾಜ್ ತಜ್ಞ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜನಾರ್ದನ ಮರವಂತೆ(88) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಿಕ್ಷಣ, ಸಮುದಾಯಾಭಿವೃದ್ಧಿ ಮತ್ತು ಸ್ಥಳೀಯಾಡಳಿತ ಕ್ಷೇತ್ರಗಳಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಜನಾರ್ದನ ಮರವಂತೆ, ಪ್ರೌಢಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ 1979ರಲ್ಲಿ ನಿವೃತ್ತರಾದರು. 15 ವರ್ಷಗಳ ಕಾಲ ಮರವಂತೆ ಗ್ರಾಪಂ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು. ಇವರು 25 ವರ್ಷಗಳ ಕಾಲ ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಅರೆಕಾಲಿಕ ವರದಿಗಾರರಾಗಿ ದುಡಿದುದಲ್ಲದೆ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬೈಂದೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಇವರು ಗ್ರಾಪಂಗಳಿಗೆ ಮಾರ್ಗದರ್ಶಿ ಎನಿಸಿರುವ ’ಜನಾಧಿಕಾರ’ ಹೆಸರಿನ ಗ್ರಂಥ ರಚಿಸಿದ್ದಾರೆ. ಇವರು 2013ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ’ಸದಾನಂದ ಪ್ರಶಸ್ತಿ’, ರಾಜ್ಯ ಸರಕಾರದ 2021ನೆ ಸಾಲಿನ ’ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಕಾ ದಿನಾಚರಣೆಯ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗುರುರಾಜ್ ಗಂಟಿಹೊಳೆ ಸಂತಾಪ ವ್ಯಕ್ತಪಡಿಸಿದ್ದಾರೆ.