×
Ad

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ 'ಬಕ್ರೀದ್' ಆಚರಣೆ

Update: 2025-06-07 09:17 IST

ಉಡುಪಿ: ಜಿಲ್ಲೆಯಾದ್ಯಂತ ಈದುಲ್ ಅಝ್‌ಹಾ (ಬಕ್ರೀದ್) ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಿದರು.

ಉಡುಪಿ ನಗರ ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ಹಾಗೂ ಬ್ರಹ್ಮಗಿರಿ ಹಾಶಿಮಿ ಮಸೀದಿಯ ಇಮಾಮ್ ಮೌಲಾನಾ ಉಬೇದಾರ್ ರೆಹಮಾನ್ ನದ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.


ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.

ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ  ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ಮೌಲಾನ ಕರಾರ್ ಹುಸೇನ್  ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರುಗಳು ಶಾಂತಿ, ಸೌಹಾರ್ದತೆಯ ಸಂದೇಶ ನೀಡಿದರು. ಸಾಮಾಜಿಕ ಜಾಲದಲ್ಲಿ ಇತರ ಸಮಾಜದವರನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವ ಪೋಸ್ಟ್ ಗಳನ್ನು ಹಾಕಬಾರದು ಎಂದು ಬ್ರಹ್ಮಗಿರಿ ಹಾಶಿಮಿ ಮಸೀದಿಯ ಇಮಾಮ್ ಮೌಲಾನಾ ಉಬೇದಾರ್ ರೆಹಮಾನ್ ನದ್ವಿ ಸಂದೇಶದಲ್ಲಿ ಕರೆ ನೀಡಿದ್ದಾರೆ.

ಡ್ರಗ್ಸ್ ಸೇವನೆಯಿಂದ ಹಲವಾರು ಯುವಕರು ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಹೆತ್ತವರು ತಮ್ಮ ಮಕ್ಕಳನ್ನು ಇಂತಹ ವಿಷ ಪದಾರ್ಥದಿಂದ ದೂರ ಇರಲು ಮಕ್ಕಳನ್ನು ಸಲಹೆ ನೀಡಬೇಕೆಂದು ಅವರು ಮನವಿ ಮಾಡಿದರು.

ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News