×
Ad

ಸ್ವಚ್ಛ ಕಡಲ ತೀರ- ಹಸಿರು ಕೋಡಿ-23ನೇ ಅಭಿಯಾನ: ಚಂದ್ರಯಾನ-3ರ ಯಶಸ್ಸಿಗೆ ಗೌರವಾರ್ಪಣೆ

Update: 2023-08-27 20:13 IST

ಕುಂದಾಪುರ, ಆ.27: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಪುರಸಭೆ ಕುಂದಾಪುರ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ರವಿವಾರ ಕೋಡಿ ಬೀಚ್‌ನಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛ ಕಡಲತೀರ-ಹಸಿರು ಕೋಡಿ ಅಭಿಯಾನ-23ನೇ ಹಂತಕ್ಕೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸ್ವಚ್ಛ ಮನಸ್ಸಿನಿಂದ ಇಂತಹ ಪರಿಸರ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗುವುದು ದೇವಾಲಯ, ಚರ್ಚ್, ಮಸೀದಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಮಾಡುವ ದೇವರ ಪ್ರಾರ್ಥನೆಗಿಂತಲೂ ಮಿಗಿಲಾಗಿರುತ್ತದೆ. ಚಂದ್ರಯಾನ-3ರ ಯಶಸ್ವಿಯ ಸಾಧನೆಯನ್ನು ವಿದ್ಯಾರ್ಥಿ ಗಳೆಲ್ಲರೂ ಸ್ಪೂರ್ತಿ ಯಾಗಿ ತೆಗೆದುಕೊಂಡು ಭವಿಷ್ಯದಲ್ಲಿ ಇಂತಹ ಸಾಧನೆಯನ್ನು ಮಾಡುವಂತೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕರಾವಳಿ ಕಾವಲು ಪೊಲೀಸ್ ಇದರ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿರುವಂತೆ ಕನಸು ಅಂದರೆ ನಿದ್ರಿಸಿಸುವಾಗ ಕಾಣುವುದಲ್ಲ, ಯಾವ ಗುರಿ ನಮ್ಮನ್ನು ಮಲಗಲು ಬಿಡುವುದಿಲ್ಲವೋ ಅದು ನಿಜವಾದ ಕನಸು. ಇದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ಯಾರೀಸ್ ಸೀ ಸೈಡ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚಂದ್ರಯಾನ-3 ರ ಮಾದರಿ ತಯಾರಿಸಿ, ಇಸ್ರೋ ಸಂಸ್ಥೆಯ ಹೆಸರನ್ನು ಪ್ರದರ್ಶಿಸಿಸುತ್ತಾ ದೇಶ ಭಕ್ತಿಗೀತೆ ಗಾಯನ ಮಾಡಿ ಗೌರವಾರ್ಪಣೆ ಸಲ್ಲಿಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹ್ಮಾನ್, ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಿಕ ನಂಜಪ್ಪ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ಆರ್‌ಎಫ್‌ಓ ಕಿರಣ್ ಬಾಬು ಮತ್ತು ಸಿಬ್ಬಂದಿ, ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷ ನವೀನ್ ಮತ್ತು ತಂಡ, ಕೋಟೇಶ್ವರ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಲಹಾ ಮಂಡಳಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕ ಪ್ರೊ.ಆಕಾಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






































 


 


 


 


 


 


 


 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News