ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಜೇಶ್ ಶೆಟ್ಟಿ ಅಲೆವೂರು
ಉಡುಪಿ, ಅ.20: ಭವಿಷ್ಯದಲ್ಲಿ ಪತ್ರಕರ್ತರಾಗಬೇಕೆಂದು ಬಯಸುವ ವಿದ್ಯಾರ್ಥಿಗಳು ಮೊದಲ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕು. ಕೇವಲ ತರಗತಿ ಪಠ್ಯಗಳಿಂದ ಪತ್ರಕರ್ತನಾಗಲು ಸಾಧ್ಯವಿಲ್ಲ. ಪ್ರಾಯೋಗಿಕ ಕೆಲಸದ ಅನುಭವ ಇರಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹೇಳಿದ್ದಾರೆ.
ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂವಹನ ಸಂಘ, ಪತ್ರಕೋದ್ಯಮ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡ ಮಾಧ್ಯವ ಬಂಧು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಗಳ ಪ್ರಾಯೋಗಿಕ ಪತ್ರಿಕೆ ‘ಅಭಿವ್ಯಕ್ತಿ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬರೆಯುವ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಮಾಹಿತಿ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಇರಬೇಕಾಗುತ್ತದೆ. ವರದಿಯನ್ನು ಬರೆಯುವ ಮತ್ತು ನಿರೂಪಿ ಸುವ ಕಲೆಯನ್ನು ಮೈಗೂಡಿಸಿಕೊಂಡರೆ ಪತ್ರಕರ್ತನಾಗಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಎಸ್. ವಹಿಸಿದ್ದರು. ಕಾಲೇಜಿನ ಕಲಾನಿಕಾಯದ ಡೀನ್ ಪ್ರೊ. ನಿಕೇತನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಯೋಗೇಶ್ ಡಿ.ಎಚ್. ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಚ್ಚೇಂದ್ರ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ವಂದಿಸಿದರು.