ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಬೈಂದೂರು, ನ.27: ಕೆನರಾ ರೋಬೆಕೊ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಆಯ್ದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಕೆನರಾ ರೋಬೆಕೊ ಸಂಸ್ಥೆಯ ಸೈಕಲ್ ಕೊಡುಗೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಸ ಬೆಸುಗೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಇನ್ನಷ್ಟು ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ನಿಟ್ಟಿನಲ್ಲಿ ಸಂಸ್ಥೆಯಯೊಂದಿಗೆ ಸಮೃದ್ಧ ಬೈಂದೂರು ತಂಡ ಸದಾ ಜೊತೆಯಾಗಿರುತ್ತೇವೆ ಎಂದರು.
ಕೆನರಾ ರೋಬೆಕೊ ಸಂಸ್ಥೆಯ ಹೆಡ್ ಇಂಟರ್ ನ್ಯಾಶನಲ್ ಆಡಿಟ್ ಗುರುಚರಣ್ ಹೊಸ್ಕೋಟೆ ಮಾತನಾಡಿ, ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಸೈಕಲ್ ಗಳು ತಲುಪುತ್ತಿರುವುದು ಸಂತಸ ತಂದಿದೆ. ಶಾಸಕರ ಮಾರ್ಗದರ್ಶನದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜಿಸಿದ ಯೋಜನೆ 300-ಟ್ರೀಸ್ ಇನ್ನಷ್ಟು ಯಶಸ್ವಿಯಾಗಲೆಂದು ಆಶಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬವಳಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು 11, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಬದಕೋಣೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಯ್ಕನ್ಕಟ್ಟೆ ಯ ವಿದ್ಯಾರ್ಥಿಗಳಿಗೆ 220ಕ್ಕೂ ಹೆಚ್ಚು ಸೈಕಲ್‌ಗಳನ್ನು ವಿತರಿಸಲಾಯಿತು.
ಕೆನರಾ ರೋಬೊಕೊ ಸಂಸ್ಥೆಯ ಪದಧಿಕಾರಿ ಸಂದೀಪ್ ಪೂಜಾರಿ, ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ, ಬಿಜೂರು ಗ್ರಾ.ಪಂ ಮಾಜಿ ಸದಸ್ಯರಾದ ರಾಜೇಂದ್ರ ಬಿಜೂರು, ವೀರೇಂದ್ರ ಶೆಟ್ಟಿ, ಶೇಖರ್ ದೇವಾಡಿಗ, ಸಮೂಹ ಸಂಪನ್ಮೂಲ ಕೇಂದ್ರ ಉಪ್ಪುಂದದ ಸಿಆರ್‌ಪಿ ಮಂಜುನಾಥ ಎಸ್, ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ವಿ. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಸುಬ್ರಹ್ಮಣ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಸುಮತಿ ವಂದಿಸಿದರು.