ಉಡುಪಿ, ನ.27: ತಮ್ಮ ಕೀರ್ತನೆಗಳ ಮೂಲಕ ಬದುಕು ರೂಪಿಸಲು ಬೇಕಾದ ಆದರ್ಶಗಳನ್ನು ಕನಕದಾಸರು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ.
ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕನಕದಾಸರು ನಾಡು ಕಂಡ ಅಪ್ರತಿಮ ದಾಸವರೇಣ್ಯರಾಗಿದ್ದು, ಉಡುಪಿ ಜಿಲ್ಲೆಗೂ ಕನಕದಾಸರಿಗ ಅವಿನಾಭಾವ ಸಂಬಂಧವಿದೆ ಎಂದರು.
ಜಾತಿ, ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತ, ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಅವರು ಎಂದು ಯಶಪಾಲ್ ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಬದುಕು ಉತ್ತಮವಾಗಲು ಮನಸ್ಸಿನಲ್ಲಿ ರುವ ದ್ವೇಷ ಅಸೂಯೆಗಳನ್ನು ಹೋಗಲಾಡಿಸಿ ಸುಂದರ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು. ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ಕನಕರೂ ಸೇರಿದಂತೆ ಅನೇಕ ಮಹನೀ ಯರು ಸಂದೇಶವನ್ನು ನೀಡಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದರು.
ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ, ಜೀವನದಲ್ಲಿ ಸದಾ ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದು ಕನಕದಾಸರ ಚಿಂತನೆ. ಸಮಾಜ ದಲ್ಲಿ ಎಲ್ಲರೂ ಸಮಾನರು. ಬದುಕಿನಲ್ಲಿ ಮಾನವೀಯತೆ ಅತೀ ಮುಖ್ಯ ಎಂಬುದನ್ನು ತಿಳಿಸಿಕೊಟ್ಟ ಕನಕದಾಸರು, ನಾವು ಮಾಡುವ ಕೆಲಸ ಮತ್ತು ಭಗವಂತನಲ್ಲಿ ಅಚಲ ನಂಬಿಕೆ ವಿಶ್ವಾಸವನ್ನು ಹೊಂದಿದಾಗ ಯಶಸ್ಸುಗಳಿಸಲು ಸಾಧ್ಯ ಎಂಬ ಸಂದೇಶವನ್ನು ಸಾರಿದರು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಡೊಳ್ಳಿನ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಇದರ ಕಾರ್ಯದರ್ಶಿ ಬಸವರಾಜ ಕುರುಬರ, ಉಡುಪಿ ಜಿಲ್ಲಾ ಹಾಲುಮತ ಮಹಾ ಸಭಾದ ಅಧ್ಯಕ್ಷ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಆಕಾಶವಾಣಿ ಉದ್ಯೋಷಕರಾದ ಪ್ರದೀಪ್ ಡಿ. ಎಂ. ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.