ಕೋಟ ಕಾರಂತ ಕಲಾಭವನಕ್ಕಾಗಿ ಕೆರೆ ಒತ್ತುವರಿ ದೂರು; ತಾಲೂಕು ಸರ್ವೆಯರ್ ನೇತೃತ್ವದಲ್ಲಿ ಪರಿಶೀಲನೆ
ಸಾಂದರ್ಭಿಕ ಚಿತ್ರ
ಕೋಟ, ನ.27: ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯದಲ್ಲಿರುವ ಕಾರಂತ ಕಲಾಭವನವನ್ನು 1.16 ಎಕ್ರೆ ಪೊರಂ ಬೋಕು ಕೆರೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಆದೇಶದ ಮೇರೆಗೆ ತಾಲೂಕು ಸರ್ವೆಯರ್ ನೇತೃತ್ವದಲ್ಲಿ ಬುಧವಾರ ಸರ್ವೆ ನಡೆಸಿ ಒತ್ತುವರಿಯ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಕೋಟತಟ್ಟು ಗ್ರಾಮದ ಸ.ನಂ.98/7ರಲ್ಲಿ 1ಎಕ್ರೆ 16 ಸೆಂಟ್ಸ್ ಪರಂಬೋಕು ಕೆರೆ ಇದ್ದು, ಸದರಿ ಕೆರೆಯನ್ನು ಸಂಪೂರ್ಣ ವಾಗಿ ಮುಚ್ಚಿ ಕಾರಂತ ಕಲಾಭವನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪೊರಂಬೋಕು ಕೆರೆಯನ್ನು ಮುಚ್ಚುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಅಪರಾಧ ವಾಗಿರುತ್ತದೆ. ಹೀಗಾಗಿ ಇದರ ಬಗ್ಗೆ ಕಾನೂನು ಕ್ರಮ ಕೈಗೊಂಡು ಒತ್ತುವರಿ ಆದ ಪರಂಬೋಕು ಕೆರೆಯನ್ನು ತೆರವು ಮಾಡಬೇಕಾಗಿ ದೇವೇಂದ್ರ ಸುವರ್ಣ ವಡ್ಡರ್ಸೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಈ ಕುರಿತು ತನಿಖೆ ಕೈಗೆತ್ತಿಕೊಂಡ ಪ್ರಾಧಿಕಾರ ಸರ್ವೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಗೆ ತಿಳಿಸಿದ್ದು ಅದರಂತೆ ಸರ್ವೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಸರ್ವೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯರಾದ ನಾಗೇಂದ್ರ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.
ಥೀಮ್ ಪಾರ್ಕ್ ಸ್ಪಷ್ಟನೆ: ಈಗಿರುವ ಕಾರಂತ ಕಲಾಭವನದ ಸಮೀಪ ಈ ಹಿಂದೆ ಕೆರೆಯೊಂದಿರುವುದು ನಿಜ. ಆದರೆ ಅದರ ಮೂಲ ವಿಸ್ತೀರ್ಣಕ್ಕೆ ಧಕ್ಕೆಯಾಗದಂತೆ ಸುತ್ತಲೂ ಕಲ್ಲುಗಳನ್ನು ಕಟ್ಟಿ ಅಭಿವೃದ್ಧಿಪಡಿಸಲಾಗಿತ್ತು ಎಂದು ಥೀಮ್ ಪಾರ್ಕ್ ಪರವಾಗಿ ಕೋಟತಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಕುಂರ್ದ ಬಾರಿಕೆರೆ ತಿಳಿಸಿದ್ದಾರೆ.
ಕೆರೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸರಕಾರಿ ಅನುದಾನದಲ್ಲಿ ಈಗಿರುವ ಥೀಮ್ ಪಾರ್ಕ್ ಕಟ್ಟಡವನ್ನು ನಿರ್ಮಿಸಲಾಗಿತ್ತು. ಥೀಮ್ ಪಾರ್ಕ್‌ನ ನಿರ್ಮಾಣ ಕಾರ್ಯವು ಅಂದಿನ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ನಡೆದಿತ್ತು. ಹೀಗಾಗಿ ಈಗ ಕೇಳಿ ಬರುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.