ಚಿನ್ನದ ಸರ ಸುಲಿಗೆ ಪ್ರಕರಣ: ಆರೋಪಿಗಳಿಂದ ಸೊತ್ತು ವಶ
ಕುಂದಾಪುರ, ನ.27: ಕೆಲವು ತಿಂಗಳ ಹಿಂದೆ ಕುಂಭಾಶಿ ಶ್ರೀವಿನಾಯಕ ದೇವಸ್ಥಾನದಲ್ಲಿ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ, ತಮಿಳುನಾಡು ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು, ಅವರಿಂದ ಸುಲಿಗೆ ಮಾಡಿದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಗಣೇಶ ಚತುರ್ಥಿಯ ದಿನ ಸೆ.14ರಂದು ಕುಂಭಾಶಿ ಶ್ರೀವಿನಾಯಕ ದೇವಸ್ಥಾನದ ಒಳಗೆ ಜನ ಜಂಗುಳಿಯ ಮಧ್ಯೆ ಪ್ರದಕ್ಷಿಣೆ ಬರುತ್ತಿದ್ದ ಬೈಂದೂರು ತಾಲೂಕು ನಾಡ ಗುಡ್ಡೆಯಂಗಡಿ ನಿವಾಸಿ ಮುತ್ತು(75) ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾ ವೇಳೆ ಪ್ರಕರಣದಲ್ಲಿ ಚಿನ್ನದ ಸರವನ್ನು ಸುಲಿಗೆ ಮಾಡಿದ ಆರೋಪಿಗಳಾದ ತಮಿಳುನಾಡು ಮೂಲದ ವಲ್ಲಿಯಮ್ಮ, ದೇವಿ ತಿಲೋತ್ತಮ, ಪೊನ್ನಿ ಎಂಬವರನ್ನು ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವ ಮಾಹಿತಿ ದೊರೆತಿದೆ.
ಬಳಿಕ ಪೊಲೀಸ್ ಕುಂದಾಪುರ ಉಪ ವಿಭಾಗದ ಉಪಾಧೀಕ್ಷಕರ ನಿರ್ಧೇಶನದಂತೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ತನಿಖೆ ನಡೆಸಿ, ನ್ಯಾಯಾಲಯದ ಆದೇಶ ಪಡೆದು ಆರೋಪಿಗಳನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಜೈಲಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಕುಂದಾಪುರಕ್ಕೆ ಕರೆತಂದು ತನಿಖೆ ನಡೆಸಿ ಆರೋಪಿಗಳು ಸುಲಿಗೆ ಮಾಡಿದ ಸುಮಾರು 2 ಲಕ್ಷ ರೂ. ಮೌಲ್ಯದ 15.340 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.