ಬಸ್ಸುಗಳಿಗೆ ಬಾಗಿಲು, ಟಿಪ್ಪರ್, ಲಾರಿಗೆ ಸ್ಪೀಡ್‌ಗವರ್ನರ್: ರಸ್ತೆ ಸುರಕ್ಷತಾ ಸಭೆಯ ನಿರ್ದೇಶನ ಪಾಲಿಸಲು ಸೂಚನೆ
ಉಡುಪಿ: ರಸ್ತೆ ಸುರಕ್ಷತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಜನವರಿ 20ರೊಳಗೆ ಕಡ್ಡಾಯವಾಗಿ ಬಾಗಿಲನ್ನು (ಡೋರ್) ಅಳವಡಿಸಿಕೊಂಡು ಸಂಚರಿಸಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅದೇ ರೀತಿ ಮರಳು, ಮಣ್ಣು, ಕೆಂಪುಕಲ್ಲು, ಶಿಲೆಕಲ್ಲು ಸಹಿತ ಖನಿಜ ವಸ್ತುಗಳನ್ನು ಸಾಗಿಸುವ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ಲಾರಿ, ಟಿಪ್ಪರ್ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್)ಗಳನ್ನು 10 ದಿನಗಳ ಒಳಗೆ ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲಾ ವಾಹನ ಮಾಲಕರು ಕ್ರಮ ವಹಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಕಾಂಕ್ರೀಟ್ ಮಿಕ್ಸರ್ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಕಾಂಕ್ರೀಟ್ ಅನ್ನು ರಸ್ತೆಯಲ್ಲಿ ಚೆಲ್ಲದೇ ಸಾಗಾಟ ಮಾಡುವ ಕುರಿತು ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಮೇಲಿನ ಎಲ್ಲಾ ವಿಷಯಗಳಲ್ಲಿ ಯಾವುದೇ ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದ ರೊಂದಿಗೆ ದಂಡ ವಿಧಿಸಲಾಗುವುದು. ಅಲ್ಲದೇ ವಾಹನವನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.