×
Ad

ಅಷ್ಟಾವಧಾನಿ ಡಾ.ಕೆ.ವಸಂತ ಭಾರದ್ವಾಜರಿಗೆ ಡಾ.ಉಪಾಧ್ಯಾಯ ದಂಪತಿ ಪ್ರಶಸ್ತಿ-2024

Update: 2025-11-15 20:11 IST

ಉಡುಪಿ: ಅಷ್ಟಾವಧಾನಿ, ಗಮಕ ವ್ಯಾಖ್ಯಾನಕಾರ, ಯಕ್ಷಗಾನ ಪ್ರಸಂಗಕರ್ತ, ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ 2024ನೇ ಸಾಲಿನ ಡಾ.ಯು.ಪಿ.ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಹು ಭಾಷಾ ವಿದ್ವಾಂಸರು, ತುಳು ನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ.ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ.ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ವನ್ನೊಳಗೊಂಡಿರುತ್ತದೆ.

ಉಡುಪಿ ಜಿಲ್ಲೆ ಕಬ್ಬಿನಾಲೆಯ ವಸಂತ ಭಾರದ್ವಾಜ್‌ರು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದು ಭಾಷೆ, ವ್ಯಾಕರಣ, ಛಂದಃಶಾಸ್ತ್ರಗಳಲ್ಲಿ ವಿದ್ವತ್ತನ್ನು ಗಳಿಸಿ, ಗಮಕ ವ್ಯಾಖ್ಯಾನಕಾರರಾಗಿ ನಾಡಿ ನಾದ್ಯಂತ ಪ್ರಸಿದ್ಧರಾಗಿದ್ದಾರೆ.

ಮಹಾಕಾವ್ಯಗಳ ಕವಿಯಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ವಾಗ್ಮಿಗಳಾಗಿ ಹೆಸರು ಮಾಡಿರುವ ಇವರು ಕಾವ್ಯ, ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟು ರಚನೆ, ಗ್ರಂಥ ಸಂಪಾದನೆ, ಗೀತರೂಪಕ ಮುಂತಾದ ಸಾಹಿತ್ಯದ ವಿವಿಧ ಪ್ರಕಾಗಳಲ್ಲಿ ಕೆಲಸ ಮಾಡಿದ್ದಾರೆ.

ಯಕ್ಷಗಾನ ಛಂದಸ್ಸು, ಪಳಂತುಳುಕಾವ್ಯ, ಶಬ್ದಶಾರದೆಯ ಸೆರಗು, ಯಕ್ಷಗಾನ ಕವಿಚರಿತ್ರೆ, ಪುರಂದರ ಮುಂಡಿಗೆ, ಕನಕ ಮುಂಡಿಗೆ, ಕನಕದಾಸರ ಕಾವ್ಯಭಾಷೆ, ಕುವೆಂಪು ಮತ್ತು ಅಧ್ಯಾತ್ಮ, ತಾವರೆಯ ತೇರು, ಛಂದೋವಸಂತ, ಯಕ್ಷಗಾನ ಪ್ರಸಂಗಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಕುವೆಂಪು ರಾಮಾಯಣ ಆಧಾರಿತ ‘ಶ್ರೀರಾಮಲೀಲಾ ದರ್ಶನಂ’ ಯಕ್ಷಗಾನ ಮಹಾಕಾವ್ಯವಾಗಿ ಮನ್ನಣೆ ಗಳಿಸಿದೆ.

‘ಕನಕ ತರಂಗಿಣಿ’ ’ಶ್ರೀಪುರಂದರ ಮಹತಿ’ ಮುಂತಾದ ಮಹಾಕಾವ್ಯಗಳು ಆಧುನಿಕ ಕಾಲದ ಛಂದೋಬದ್ಧ ಮಹಾನ್ ಕೃತಿಗಳಾಗಿವೆ. ಯಕ್ಷಗಾನ ಛಂದಸ್ಸಿನ ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಇವರು ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕನಕ ಗೌರವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರಾವಳಿ ರತ್ನ, ಗಮಕ ರತ್ನಾಕರ ಪ್ರಶಸ್ತಿ, ವಿದ್ಯಾಭೂಷಣ ಪ್ರಶಸ್ತಿ, ಅಕಳಂಕ ಪ್ರಶಸ್ತಿ, ಯಕ್ಷಮಂಗಳಾ ಕೃತಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಮೊದಲಾದ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News