×
Ad

ಬೆಂಗಳೂರು- ಮೈಸೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಮುರ್ಡೇಶ್ವರದವರೆಗೆ ವಿಸ್ತರಣೆ

Update: 2023-09-16 20:44 IST

ಉಡುಪಿ, ಸೆ.16: ವಾರದಲ್ಲಿ ಆರು ದಿನ ಮೈಸೂರು ಮೂಲಕ ಸಂಚರಿಸುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಾಗೂ ಮಂಗಳೂರು ಸೆಂಟ್ರಲ್ ನಡುವಿನ ಎಕ್ಸ್‌ಪ್ರೆಸ್ ರೈಲನ್ನು ಇಂದಿನಿಂದ ಮುರ್ಡೇಶ್ವರದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಹೊರತು ಪಡಿಸಿ ವಾರದ ಉಳಿದ ಆರು ದಿನಗಳಲ್ಲಿ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಿ ಮುರ್ಡೇಶ್ವರದವರೆಗೆ ಸಂಚರಿಸಲಿದೆ.

ಅದೇ ರೀತಿ ರೈಲು ನಂ.16586 ಮಂಗಳೂರು ಸೆಂಟ್ರಲ್- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸೆ.17ರಿಂದ ಶನಿವಾರವನ್ನು ಹೊರತು ಪಡಿಸಿ ವಾರದ ಉಳಿದ ಆರು ದಿನಗಳಲ್ಲಿ ಮಂಗಳೂರು ಸೆಂಟ್ರಲ್ ಬದಲು ಮುರ್ಡೇಶ್ವರದಿಂದ ಪ್ರಯಾಣ ಪ್ರಾರಂಭಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿ ನಿಂದ ಪ್ರತಿದಿನ ರಾತ್ರಿ 8:15ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಮರುದಿನ ಅಪರಾಹ್ನ 1:15ಕ್ಕೆ ಮುರ್ಡೇಶ್ವರ ತಲುಪಲಿದೆ. ಹಾಗೆಯೇ ರೈಲು ನಂ. 16586 ಸೆ.17ರಿಂದ ಪ್ರತಿದಿನ ಅಪರಾಹ್ನ 2:10ಕ್ಕೆ ಮುರ್ಡೇಶ್ವರದಿಂದ ಪ್ರಯಾಣ ಪ್ರಾರಂಭಿಸಿ ಮರುದಿನ ಮುಂಜಾನೆ 7:15ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಮೈಸೂರು ಮೂಲಕ ಸಂಚರಿಸುವ ಈ ರೈಲು ಬೆಂಗಳೂರು ಮತ್ತು ಪಡೀಲು ನಡುವೆ ಈ ಹಿಂದಿನಂತೆ ಪ್ರತಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ಇದೀಗ ಹೆಚ್ಚುವರಿಯಾಗಿ ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು ಹಾಗೂ ಭಟ್ಕಳದಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.

ಈ ರೈಲು ಒಟ್ಟು 19 ಕೋಚ್‌ಗಳನ್ನು ಹೊಂದಿರುತ್ತದೆ. ಇದರಲ್ಲಿ ಒಂದು ಫಸ್ಟ್ ಎಸಿ, ಒಂದು ಟೂ ಟಯರ್ ಎಸಿ, ಎರಡು ತ್ರಿಟಯರ್ ಎಸಿ, 9 ಸ್ಲೀಪರ್ ಕೋಚ್, 4 ಜನರಲ್ ಕೋಚ್ ಹಾಗೂ ಎರಡು ಎಸ್‌ಎಲ್‌ಆರ್ ಕೋಚ್‌ಗಳನ್ನು ಒಳಗೊಂಡಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News