×
Ad

ಭ್ರೂಣಲಿಂಗ ಪತ್ತೆ ಪ್ರಕ್ರಿಯೆ ಶಿಕ್ಷಾರ್ಹ ಅಪರಾಧ: ಡಾ.ರಾಜಲಕ್ಷ್ಮೀ

Update: 2023-11-27 21:58 IST

ಉಡುಪಿ, ನ.27: ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಮಾಡುವುದು, ಪ್ರಚೋದಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ. ರಾಜಲಕ್ಷ್ಮಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿ ಕಾರಿಗಳ ಕಚೇರಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಐಎಂಎ ಉಡುಪಿ ಕರಾವಳಿ ಇವರ ಸಹಯೋಗದಲ್ಲಿ ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯ ಕುರಿತು ಆರೋಗ್ಯ ಸಿಬ್ಬಂದಿ ವರ್ಗದವರಿಗೆ ನಡೆದ ಅರಿವು ಕಾರ್ಯಗಾರವನ್ನು ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಕುಸಿಯುತ್ತಿರುವ ಲಿಂಗಾನುಪಾತವು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ.ಆದ್ದರಿಂದ ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕ ವಾಗಿದೆ ಎಂದರು.

ಬಾಲನ್ಯಾಯ ಮಂಡಳಿಯ ಸದಸ್ಯೆ ಹಾಗೂ ವಕೀಲೆ ಅಮೃತಕಲಾ ಲಿಂಗ ಆಯ್ಕೆಯ ನಿಷೇಧ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ತೆರೆಸಾ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ರಂಜಿತ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News