ಕೋಟ: ಮನೆಯಲ್ಲಿದ್ದ ಚಿನ್ನಾಭರಣ ಕಳವು; ಪ್ರಕರಣ ದಾಖಲು
Update: 2023-10-04 14:52 IST
ಕೋಟ, ಅ.4: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣವೊಂದು ಕಳವಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಳೂರು ನಿವಾಸಿ ಕಿರಣ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಮಗಳ ಹುಟ್ಟುಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅ.1 ಮತ್ತು 2ರಂದು ಮನೆ ಸ್ವಚ್ಛತೆಯ ಕೆಲಸಕ್ಕೆಂದು ಕೆಲಸಗಾರರು ಬಂದು ಹೋಗಿದ್ದಾರೆ. ಈ ಮಧ್ಯೆ ಕಿರಣ್ ತನ್ನ ಚಿನ್ನದ ಬ್ರೇಸ್ಲೈಟ್ ಮತ್ತು ಚಿನ್ನದ ಕೈ ಬಳೆಯನ್ನು ಮಲಗುವ ಕೋಣೆಯ ಟಿವಿ ಸ್ಟ್ಯಾಂಡ್ ರಾಕಿನ ಒಳಗಡೆ ಇಟ್ಟಿದ್ದರು.
ಇದರಲ್ಲಿ 27 ಗ್ರಾಂ ತೂಕದ 2,00,000ರೂ. ಮೌಲ್ಯದ ಚಿನ್ನದ ಕೈ ಬಳೆಯು ಕಳವು ಆಗಿರುವುದು ಕಂಡುಬಂದಿದೆ. ಮನೆ ಕೆಲಸಕ್ಕೆಂದು ಬಂದವರೇ ಇದನ್ನು ಕಳವು ಮಾಡಿರುವ ಬಗ್ಗೆ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.