×
Ad

ಸರಕಾರ, ಖಾಸಗಿಯಿಂದ ಬಲಿಷ್ಠ ಶಿಕ್ಷಣ ವ್ಯವಸ್ಥೆ ಕಟ್ಟಲು ಸಾಧ್ಯ: ಡಾ.ಮೋಹನ್ ಆಳ್ವ

ಕುಷ್ಮಾ ಉಡುಪಿ ಜಿಲ್ಲಾ ಸಮಿತಿ ಉದ್ಘಾಟನೆ-ಪದಾಧಿಕಾರಿಗಳ ಪದಗ್ರಹಣ

Update: 2026-01-15 20:13 IST

ಉಡುಪಿ, ಜ.15: ರಾಜ್ಯದಲ್ಲಿ 6189 ಪದವಿ ಪೂರ್ವ ಕಾಲೇಜುಗಳಿದ್ದು, ಅದರಲ್ಲಿ 3637 ಖಾಸಗಿ ಕಾಲೇಜುಗಳಿವೆ. ಸರಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದುದರಿಂದ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳು ಸೇರಿದರೆ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠ ವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಷ್ಮಾ)ದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.

ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಷ್ಮಾ) ಇದರ ಉಡುಪಿ ಜಿಲ್ಲಾ ಸಮಿತಿಯನ್ನು ಗುರುವಾರ ಕಡಿಯಾಳಿ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಉದ್ಘಾಟಿಸಿ, ಕುಷ್ಮಾ ಜಿಲ್ಲಾ ಸಮಿತಿಯ ಪದಗ್ರಹಣವನ್ನು ನೆರವೇರಿಸಿ ಅವರು ಮಾತನಾಡುತಿದ್ದರು.

ಎಲ್ಲ ಕ್ಷೇತ್ರದಲ್ಲೂ ಸರಕಾರಿ ಹಾಗೂ ಖಾಸಗಿ ಧೋರಣೆ ಎಂಬುದು ಇದೆ. ಎಲ್ಲ ಕ್ಷೇತ್ರದಲ್ಲೂ ಸರಕಾರಿಗಿಂತ ಖಾಸಗಿ ವಲಯ ಬಹಳ ದೊಡ್ಡ ಕೆಲಸ ಮಾಡಿರುವುದರಿಂದ ಈ ದೇಶ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಬೆಳೆದಿದೆ. ಖಾಸಗಿ ಕ್ಷೇತ್ರ ಈ ಮಟ್ಟದಲ್ಲಿ ಬೆಳೆಯದಿದ್ದರೆ ಭಾರತ ಜಾಗತಿಕ ಮಟ್ಟದಲ್ಲಿ ಬೇರೆ ದೇಶಕ್ಕೆ ಸವಾಲು ನೀಡಲು ಸಾಧ್ಯವಾಗುತ್ತಿ ರಲಿಲ್ಲ. ಇಂದು ಖಾಸಗಿ ಕ್ಷೇತ್ರದಿಂದ ಬಹುತೇಕ ಮಂದಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಸರಕಾರ ಮತ್ತು ಇಲಾಖೆ ಇಂದು ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದಾರೆ. ಖಾಸಗಿ ಧೋರಣೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯನ್ನು ಮನಗಾಣಬೇಕು. ಆರೋಗ್ಯ ಕ್ಷೇತ್ರದಂತೆ ಶಿಕ್ಷಣ ಕ್ಷೇತ್ರಕ್ಕೂ ವ್ಯಾಪಾರಿ ಮನೋಭಾವನೆಯವರು ಬಂದಿರಬಹುದು. ಆ ಕಾರಣಕ್ಕೆ ಎಲ್ಲರನ್ನು ದೂಷಿಸುವುದು ಸರಿಯಲ್ಲ. ಇದನ್ನು ಸರಕಾರಿ ಹಾಗೂ ಇಲಾಖೆ ನಿಯಂತ್ರಣ ಮಾಡಬೇಕು. ಇದರಲ್ಲಿ ನಿಜವಾದ ವ್ಯಾಪಾರಿಗಳು ಯಾರು ಹಾಗೂ ಸೇವಾ ಮನೋ ಭಾವದವರು ಯಾರು ಎಂಬುದನ್ನು ತಿಳಿದುಕೊಳ್ಳ ಬೇಕು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದು ಸರಿಯಲ್ಲ ಎಂದರು.

ಅಧ್ಯಕ್ಷತೆಯನ್ನು ಕುಷ್ಮಾ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಶಾಂತ್ ಶೆಟ್ಟಿ ವಹಿಸಿದ್ದರು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಮಾರುತಿ ಮಾತನಾಡಿದರು. ಕುಷ್ಮಾ ರಾಜ್ಯ ಸಮಿತಿ ಗೌರವಾಧ್ಯಕ್ಷ ಕೆ.ರಾಧಾಕೃಷ್ಣ ಶೆಣೈ, ಉಪಾಧ್ಯಕ್ಷ ಡಾ.ಮಂಜುನಾಥ್ ರೇವಣ್ ಕರ್ ಉಪಸ್ಥಿತರಿದ್ದರು.

ಕುಷ್ಮಾ ಜಿಲ್ಲಾಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶ್ವತ್ ಎಸ್.ಎಲ್. ವಂದಿಸಿದರು. ಲೋಹಿತ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News