ಅಕ್ರಮ ಮರಳು, ಶಿಲೆಕಲ್ಲು ಸಾಗಾಟ ಪ್ರಕರಣ: ನಾಲ್ವರ ಬಂಧನ, ಮೂರು ಲಾರಿ ವಶ
ಉಡುಪಿ, ಜ.5: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು, ಶಿಲೆಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಿ, ಮೂರು ಲಾರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಬೆಟ್ಟು ಅತ್ತೂರು ಚರ್ಚ್ ದ್ವಾರದ ಬಳಿ ಜ.5ರಂದು ಅಕ್ರಮವಾಗಿ 3 ಯುನಿಟ್ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿ ಚೇರ್ಕಾಡಿ ಪೇತ್ರಿಯ ವಿನ್ಸೆಂಟ್ ಪ್ರಕಾಶ ಅಲ್ಮೇಡಾ(54) ಹಾಗೂ ಚಾಲಕ ಮುಡಾರು ಗ್ರಾಮದ ದಿಡಿಂಬಿರಿಯ ಸಮ್ಯೇಗ್ದ್ ಜೈನ್(25) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿ ಜ.5ರಂದು ಅಕ್ರಮವಾಗಿ ಚಪ್ಪಡಿ ಕಲ್ಲುಗಳನ್ನು ಸಾಗಿಸುತ್ತಿದ್ದ ಟಿಪ್ಪರನ್ನು ವಶಪಡಿಸಿಕೊಂಡ ಪೊಲೀಸರು, ಚಾಲಕನ ಶಿವಮೊಗ್ಗ ಹೊಸನಗರ ತಾಲೂಕಿನ ಸುರೇಶ(54) ಎಂಬಾತನನ್ನು ಬಂಧಿಸಿದ್ದಾರೆ. ಲಾರಿಯಲ್ಲಿದ್ದ 30 ಸಾವಿರ ರೂ. ಮೌಲ್ಯದ 12 ಟನ್ ಚಪ್ಪಡಿ ಶಿಲೆಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ರಿಂಗ್ ರೋಡ್ ಬಳಿ ಜ.2ರಂದು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಚಾಲಕ ಕಾರ್ಕಳ ತೆಳ್ಳಾರು ನಿವಾಸಿ ಶೇಖ್ ನದೀಮ್(30) ಎಂಬಾತನನ್ನು ಬಂಧಿಸಿದ್ದಾರೆ. ಲಾರಿಯಲ್ಲಿದ್ದ 13000ರೂ. ಮೌಲ್ಯದ ಮೂರು ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.