×
Ad

ಎಸ್‌ಸಿಡಿಸಿಸಿ ಬ್ಯಾಂಕ್ ಗೋಳಿಯಂಗಡಿ ಶಾಖೆಯ ನೂತನ ಎಟಿಎಂ ಕೇಂದ್ರ ಉದ್ಘಾಟನೆ

Update: 2023-09-04 19:31 IST

ಕುಂದಾಪುರ, ಸೆ.4: ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ನಾವು ನಿಸ್ವಾರ್ಥವಾಗಿ ಜನರ ಸೇವೆ ಮಾಡುತ್ತಿದ್ದು ಸದೃಢವಾಗಿ ದ್ದೇವೆ. ಹೀಗಾಗಿ ಜನರು ನಮ್ಮಲ್ಲಿ ವಿಶ್ವಾಸವಿಟ್ಟು ಅವರ ಹಣವನ್ನು ಠೇವಣಾತಿ ರೂಪದಲ್ಲಿ ಇರಿಸುತ್ತಿದ್ದಾರೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಗೋಳಿಯಂಗಡಿ ಶಾಖಾ ಕಟ್ಟಡದಲ್ಲಿ ಸೋಮವಾರ ಜರಗಿದ ನೂತನ ಎಟಿಎಂ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗೋಳಿಯಂಗಡಿಯಲ್ಲಿ 2007ರಲ್ಲಿ ಆರಂಭಗೊಂಡ ಎಸ್‌ಸಿಡಿಸಿಸಿ ಶಾಖೆಯು ಈವರೆಗೆ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡುವುದರ ಜೊತೆಗೆ ನವೋದಯ ಸ್ವ-ಸಹಾಯ ಸಂಘಗಳನ್ನು ಅಭಿವೃದ್ದಿಪಡಿಸಿದೆ. 54 ಕೋಟಿ ರೂ. ಠೇವಣಿಯಲ್ಲಿ 58 ಕೋಟಿ ರೂ. ಸಾಲ ನೀಡಿದ್ದು, ಜನರು ಕೊಟ್ಟಿರುವ ಹಣಕ್ಕಿಂತ ಹೆಚ್ಚು ಸಾಲ ನೀಡಿರುವ ಹೆಗ್ಗಳಿಕೆ ಗೋಳಿಯಂಗಡಿ ಶಾಖೆಗಿದೆ ಎಂದರು.

ಕೃಷಿ ಸಾಲವನ್ನು ಯಾವುದೇ ಲಾಭದ ಉದ್ದೇಶದಿಂದ ನಮ್ಮ ಸಂಸ್ಥೆ ನೀಡುತ್ತಿಲ್ಲ. ರೈತರ ಬದುಕು ಹಸನಾಗಬೇಕು ಎಂಬ ಸದುದ್ದೇಶದಿಂದ ಕೃಷಿ ಸಾಲವನ್ನು ಸರಕಾರದ 3 ಲಕ್ಷದವರೆಗಿನ ಬೆಳೆ ಸಾಲ, ಶೇ.3ರಷ್ಟು ಬಡ್ಡಿದರದಲ್ಲಿ 10 ಲಕ್ಷದವ ರೆಗಿನ ಮಧ್ಯಮಾವಧಿ ಸಾಲವನ್ನು ವಿತರಣೆ ಮಾಡುತ್ತಿದ್ದೇವೆ. ಬೆಳೆ ಸಾಲ, ಮಧ್ಯಮಾವಧಿ ಸಾಲದ ಬಡ್ಡಿ ಸರ್ಕಾರದಿಂದ ಬರುವಾಗ 2 ವರ್ಷ ದಾಟುತ್ತದೆ. ಆದರೂ ನಾವು ರೈತರ ನೆರವಿಗೆ ನಿಂತಿದ್ದೇವೆ ಎಂದು ಅವರು ತಿಳಿಸಿದರು.

ಅವಿಭಜಿತ ದ.ಕ ಜಿಲ್ಲೆಯಲ್ಲಿ ಹಲವಾರು ಬ್ಯಾಂಕ್‌ಗಳು ಉದಯವಾಗಿದ್ದು ನಮ್ಮ ಜಿಲ್ಲೆ ಬ್ಯಾಂಕುಗಳ ತವರೂರು. ಆದರೆ ಬ್ಯಾಂಕ್‌ಗಳ ವಿಲೀನದಿಂದಾಗಿ ಕೆಲವು ಬ್ಯಾಂಕ್‌ಗಳ ಹೆಸರುಗಳೇ ಇಂದು ಕಣ್ಮರೆಯಾಗಿದೆ. ಬ್ಯಾಂಕ್ ವಿಲೀನದ ಬಳಿಕ ಭಾಷೆ, ಸಂಸ್ಕೃತಿಯ ಅರಿವಿರದ ಸಿಬ್ಬಂದಿಗಳನ್ನು ಕಾಣುತ್ತಿದ್ದೇವೆ. ಆದರೆ ನಾವು ಹಾಗಲ್ಲ. ಹೆಚ್ಚೆಚ್ಚು ಶಾಖೆಗಳನ್ನು ತೆರೆದು ನಮ್ಮವರನ್ನೇ, ನಮ್ಮ ಸಂಸ್ಕೃತಿ ಅರಿತವರನ್ನೇ ಸಿಬ್ಬಂದಿಗಳಾಗಿ ನೇಮಕ ಮಾಡಿ ಗ್ರಾಹಕರ ಸೇವೆಗೆ ಬಿಟ್ಟಿದ್ದೇವೆ ಎಂದು ಅವರು ಹೇಳಿದರು.

ನೂತನ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನವಾಗಿ ಅನ್ಯ ಭಾಷೆಯ ಅಧಿಕಾರಿ, ಸಿಬ್ಬಂದಿ ಗಳು ಗ್ರಾಮೀಣ ಭಾಗಕ್ಕೆ ಬರುತ್ತಿದ್ದು ಇದರಿಂದ ಸ್ಥಳೀಯ ಗ್ರಾಹಕರಿಗೆ ಭಾಷೆ, ಸಂವಹನ ಕೊರತೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸ್ಥಳೀಯ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಿ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಾನುರಾಗಿ ಯಾಗಿದೆ. ಈ ಜನಪರ ಸೇವೆ ಮುಂದುವರೆಯಬೇಕು ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಜಯರಾಮ್ ಶೆಟ್ಟಿ, ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಟ್ಟಡ ಮಾಲಕ ನಾಗರಾಜ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಠೇವಣಿ ಪತ್ರ, ಗೃಹ ನಿರ್ಮಾಣ ಸಾಲ ಪತ್ರ, ವಾಹನ ಖರೀದಿ ಸಾಲ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ನೂತನ ನವೋದಯ ಸ್ವ- ಸಹಾಯ ಗುಂಪುಗಳನ್ನು ಉದ್ಘಾಟಿಸಲಾಗಿದ್ದು, ಗುಂಪಿನ ಅಧ್ಯಕ್ಷ, ಕಾರ್ಯ ದರ್ಶಿಗಳಿಗೆ ಪುಸ್ತಕ ವಿತರಿಸುವ ಜೊತೆಗೆ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಸುಮಾರು 1 ಕೋಟಿಗೂ ಮಿಕ್ಕಿದ ಸಾಲ ವಿತರಿಸಲಾಯಿತು. ಚೈತನ್ಯ ವಿಮಾ ಪರಿಹಾರ ಚೆಕ್ ವಿತರಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ ಪ್ರಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News