×
Ad

ಸಿಆರ್‌ಝೆಡ್ ಸಮಸ್ಯೆಗಳ ನಿವಾರಣೆಗೆ ಪ್ರತ್ಯೇಕ ನೀತಿ, ಸಿಂಗಲ್ ವಿಂಡೋ ರಚನೆ: ಶಾಸಕ ಶರತ್ ಬಚ್ಚೇಗೌಡ

‘ಬ್ಯಾರೀಸ್ ಉತ್ಸವ’, ‘ಸಂಸ್ಥಾಪಕರ ದಿನಾಚರಣೆ’, ಶಾಲಾ ವಾರ್ಷಿಕೋತ್ಸವ

Update: 2025-12-27 15:42 IST

ಕುಂದಾಪುರ, ಡಿ.27: ಬೆಂಗಳೂರು ಬಿಟ್ಟರೆ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕರಾವಳಿ ಜಿಲ್ಲೆಗಳಿಂದ ಹೆಚ್ಚಿನ ಕೊಡುಗೆ ಇದೆ. ಕರಾವಳಿ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಸಿಆರ್‌ಝೆಡ್ ಅಡತಡೆಯಂತಹ ಸಮಸ್ಯೆಗಳ ನಿವಾರಣೆಗಾಗಿ ಪ್ರತ್ಯೇಕ ನೀತಿ ಹಾಗೂ ಸಿಂಗಲ್ ವಿಂಡೋ ರಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಹೊಸಕೋಟೆಯ ಶಾಸಕ ಹಾಗೂ ಕಿಯೋನಿಕ್ಸ್ ನ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ  ಶನಿವಾರ ನಡೆದ ಕೋಡಿ ಬ್ಯಾರೀಸ್ ಸಂಸ್ಥೆಯ 120ರ ಸಂಭ್ರಮ ’ಬ್ಯಾರೀಸ್ ಉತ್ಸವ-2025’ ಮತ್ತು ’ಸಂಸ್ಥಾಪಕರ ದಿನಾಚರಣೆ’ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಯುವಜನತೆ ಬೇರೆಡೆ ಉದ್ಯೋಗ ಅರಸಿ ಹೋಗುವುದನ್ನು ತಡೆಯಲು ಅವರಿಗೆ ಇಲ್ಲಿಯೇ ವಿಫುಲ ಅವಕಾಶ ಕಲ್ಪಿಸಲು ’ಲೀಫ್’ ಕಲ್ಪನೆಯಡಿ ಸರಕಾರ ಒಂದು ಸಾವಿರ ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಇದರಿಂದ ಪ್ರತಿಭಾನ್ವಿತರು, ನವೋದ್ಯಮಿಗಳಿಗೆ ಅನುಕೂಲವಾಗಲಿದೆ. ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಕರಾವಳಿ ಜಿಲ್ಲೆಗಳ ಪಾತ್ರ ಮಹತ್ತರವಾಗಿದೆ. 360 ಕಿ.ಮೀ. ಉದ್ದದ ಕರಾವಳಿ ತೀರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಚಿಂತನೆಯೊಂದಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಕ್ತಿ ತುಂಬಬೇಕು. ಈ ಮೂಲಕ ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ ಎಂದರು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕರಾವಳಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸಿ ಅಂತಹ ಕಷ್ಟಕಾಲದಲ್ಲಿ ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸಿದ ಬ್ಯಾರೀಸ್ ವಿದ್ಯಾಸಂಸ್ಥೆಯು 120 ವರ್ಷದ ಸಂಭ್ರಮದಲ್ಲಿದೆ. ಇಂದು ಕರಾವಳಿ ಅಭಿವೃದ್ಧಿ, ಇಲ್ಲಿನ ಪರಿಸರ ಸ್ವಚ್ಚತೆಯ ಪಣತೊಟ್ಟ ಬ್ಯಾರೀಸ್ ಗ್ರೂಫ್ ಇಂದು ವಿವಿಧ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಶಿಕ್ಷಣ ಸಂಸ್ಥೆಯಲ್ಲಿ ಐದಾರು ಸಾವಿರ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಮುಂಚೂಣಿಯಲ್ಲಿದೆ ಎಂದರು.

ರಾಜ್ಯ ಸರಕಾರದ ವಿಷನ್ ಗ್ರೂಪ್ ಫಾರ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ ನ ಸದಸ್ಯ ಅರುಣ್ ಸೀತಾರಾಮ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನಕೊಟ್ಟು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕು. ಶೈಕ್ಷಣಿಕ ಪರೀಕ್ಷೆಯಂತೆ ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸೋತು ಗೆಲ್ಲುವುದೇ ನಿಜವಾದ ಜೀವನ ಎಂದರು.

ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇವರ ದಯೆಯೇ ಜ್ಞಾನದ ಆರಂಭ. ಅದರಿಂದ ಶಿಕ್ಷಣ ಒಲಿಯಲಿದೆ. ಮಂಗಳೂರಿನ ತೊಕ್ಕೊಟ್ಟಿನಿಂದ ಕಾರವಾರದವರೆಗಿನ 320 ಕಿ.ಮೀ. ಇರುವ ರಾಜ್ಯದ ಕರಾವಳಿ ತೀರದಲ್ಲಿ ಸಾಕಷ್ಟು ಮೀನುಗಾರಿಕಾ ಬಂದರುಗಳಿವೆ. ಮೀನು ಉತ್ನನ್ನಗಳನ್ನು ರಫ್ತು-ಆಮದು ಮಾಡಿಕೊಳ್ಳಲು ಬಳಸಿಕೊಳ್ಳಬೇಕಿದೆ. ಒಂದೊಂದು ಪ್ರದೇಶವನ್ನು ಒಂದೊಂದು ಸೆಕ್ಟರ್ಗಳಾಗಿ ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.

ಮಂಗಳೂರು, ಮಲ್ಪೆ ಎಲ್ಲದಕ್ಕೂ ಕೇಂದ್ರವಾದರೆ, ಗಂಗೊಳ್ಳಿ ಮೀನುಗಾರಿಕೆ, ಕೋಡಿ ಶಿಕ್ಷಣ ಹೀಗೆ ಅಲ್ಲಿನ ವಿಶೇಷತೆಗೆ ಅನುಗುಣವಾಗಿ ಆ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕಾಗಿದೆ. ಆದರೆ ಇದರಿಂದ ಇಲ್ಲಿನವರ ಮೂಲ ಕಸುಬಾದ ಮೀನುಗಾರಿಕೆಗೆ ಅಡ್ಡಿಯಾಗಬಾರದು. ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಜಾತಿ, ಮತ, ಪಕ್ಷ ಬೇಧ ಮರೆತು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಸೋಮಶೇಖರ್ ಉಡುಪ ಅವರನ್ನು ಸನ್ಮಾನಿಸಲಾಯಿತು. ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್., ಕೆ.ಎಂ.ಎಫ್ ಬೆಂಗಳೂರಿನ ಅಧ್ಯಕ್ಷ ಮಂಜುನಾಥ್, ಕೋಡಿ ಶ್ರೀಚಕ್ರಮ್ಮ ದೇವಸ್ಥಾನದ ಗೋಪಾಲ ಪೂಜಾರಿ, ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ ನ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಸಿದ್ಧಿಖ್ ಬ್ಯಾರಿ, ಡಾ.ಆಸೀಫ್ ಬ್ಯಾರಿ, ಡೀನ್ ಅಕಾಡೆಮಿಕ್ಸ್ ಡಾ.ಪೂರ್ಣಿಮಾ ಶೆಟ್ಟಿ, ಬ್ಯಾರೀಸ್ ಡಿ.ಎಡ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಪ್ರಮುಖರಾದ ಡಾ.ಜಯಶೀಲ ಶೆಟ್ಟಿ, ಜಟ್ಟಪ್ಪ, ಸುಮಿತ್ರಾ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ ನ ನಿರ್ದೇಶಕಿ ಹಾಗೂ ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಲಮೀಸ್ ಹಾಗೂ ಸ್ವಾತಿ ಕಾರ್ಯಕ್ರಮ ನಿರೂಪಿಸಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ವಂದಿಸಿದರು.

‘ಉಚಿತ ಶಿಕ್ಷಣದಿಂದ ಹಿಡಿದು ಲಕ್ಷಗಟ್ಟಲೇ ಫೀಸು-ಡೊನೇಶನ್ ಪಡೆದು ಶಿಕ್ಷಣ ವ್ಯವಸ್ಥೆಯಲ್ಲಿ ತಾರತಮ್ಯವಿರುವ ಕಾಲಘಟ್ಟದಲ್ಲಿ ಕಳೆದ 120 ವರ್ಷದಿಂದ ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸೇವಾ ಮನೋಭಾವನೆ ಶ್ಲಾಘನೀಯ. ಪ್ರತಿ ಮಗವೂ ವಿದ್ಯೆ ಪಡೆಯುವ ಮೂಲಭೂತ ಹಕ್ಕು ಹೊಂದಲು ಬ್ಯಾರೀಸ್ ಕೈಜೋಡಿಸಿದೆ. ಬ್ಯಾರೀಸ್ ಗ್ರೂಫ್ ಆಶಯದಂತೆ ಕರಾವಳಿ ಇನ್ನಷ್ಟು ಅಭಿವೃದ್ಧಿಯಾಗಬೇಕು’

-ಶರತ್ ಬಚ್ಚೆಗೌಡ, ಅಧ್ಯಕ್ಷರು, ಕಿಯೋನಿಕ್ಸ್

ಕರಾವಳಿ ಅಭಿವೃದ್ಧಿಗೆ ಸಿ.ರ್ಆ.ಝಡ್ ತೊಡಕಾಗಿದೆ. ಬೇರೆ ರಾಜ್ಯಗಳಂತೆ ಸಿಆರ್ಝಡ್ ಮಿತಿಗಳನ್ನು ಸಡಿಲಿಕೆ ಮಾಡುವ ಬಗ್ಗೆ ಕರಾವಳಿ ಜಿಲ್ಲೆಯಲ್ಲಿ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸರಕಾರ ಮುಂದಾಗಬೇಕು. ಕೋಡಿಯಲ್ಲಿ 26 ಎಕ್ರೆ ಸರಕಾರಿ ಜಾಗವಿದ್ದು ಸಮಸ್ಯೆ ಬಗೆಹರಿದರೆ ಕರಾವಳಿ ಅಭಿವೃದ್ಧಿ ಜೊತೆಗೆ ಪ್ರವಾಸೋಧ್ಯಮಕ್ಕೂ ಅನುಕೂಲವಾಗಲಿದೆ’

-ಎ.ಕಿರಣ್ ಕುಮಾರ್ ಕೊಡ್ಗಿ, ಶಾಸಕರು, ಕುಂದಾಪುರ

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News