×
Ad

ಚಿನ್ನಾಭರಣ ಕಳವು ಪ್ರಕರಣ: ಆರೋಪಿಯ ಬಂಧನ

Update: 2024-08-26 20:49 IST

ಉಡುಪಿ, ಆ.26: ನಗರದ ಶಿರಿಬೀಡು ವಾರ್ಡ್‌ನ ಕಾಡಬೆಟ್ಟು ಎಂಬಲ್ಲಿ ಕೆಲ ದಿನಗಳ ಹಿಂದೆ ನಡೆದ ಮನೆಗಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ಮಂಗಳಪೇಟೆ ನಿವಾಸಿ ಆರೀಫ್ ಮುನ್ನಾ(37) ಬಂಧಿತ ಆರೋಪಿ. ಟಿ.ಪ್ರಶಾಂತ್ ಪೈ ಎಂಬವರ ಮನೆಗೆ ಆ.18ರಂದು ನುಗ್ಗಿದ ಕಳ್ಳರು, ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಶ್ರೀಧರ್ ವಿ.ಸತಾರೆ ನೇತೃತ್ವದಲ್ಲಿ ಎಸ್ಸೈ ಈರಣ್ಣ ಶಿರಗುಂಪಿ, ಸಿಬ್ಬಂದಿ ಸುರೇಶ್, ಆನಂದ ಎಸ್., ಹೇಮಂತ್ ಕುಮಾರ್ ಹಾಗೂ ಶಿವಕುಮಾರ್ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿದ್ದು, ಆ.24ರಂದು ಆರೋಪಿ ಯನ್ನು ಉಡುಪಿಯ ಕೃಷ್ಣ ಮಠದ ರಾಜಂಗಣದ ಬಳಿ ಕೃತ್ಯಕ್ಕೆ ಬಳಸಿದ ಬೈಕ್ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಯಿಂದ ಕಳವುಗೈದ ಒಟ್ಟು 35964ರೂ. ಮೌಲ್ಯದ 5.400 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕಳವು ಮಾಡಲು ಬಳಸಿದ 25ಸಾವಿರ ರೂ. ಬೈಕ್ ಮತ್ತು ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೀಫ್ ಮುನ್ನಾ ವಿರುದ್ಧ ಈಗಾಗಲೇ ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News