ಅಂಚೆ ಮೂಲಕ ಕನ್ನಡ ಶಿಕ್ಷಣ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಡಿ.30: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಮೈಸೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾ ಲಯವು ಕನ್ನಡ ಬಾರದ ಸರಕಾರಿ ನೌಕರರಿಗೆ ಹನ್ನೆರಡು ತಿಂಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯನ್ನು ನಡೆಸುತ್ತಿದ್ದು, ರಾಜ್ಯದಲ್ಲಿರುವ ನಗರಸಭೆ, ಕವಿಪ್ರನಿನಿ, ಕೆಎಸ್ಸಾರ್ಟಿಸಿ, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಮತ್ತಿತರ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಈ ಯೋಜನೆಯನ್ನು ಇದೀಗ ಸಾರ್ವಜನಿಕರಿಗೂ ಸಹ ವಿಸ್ತರಿಸಲಾಗಿದ್ದು, ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಉತ್ತೀರ್ಣರಾದ 18ರಿಂದ 50 ವರ್ಷದೊಳಗಿನ ಆಸಕ್ತ ಸಾರ್ವಜನಿಕರು ಭರ್ತಿ ಮಾಡಿದ ಅರ್ಜಿಯ ಜೊತೆಗೆ ರೂ.250 ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಕಳುಹಿಸಬೇಕು. ನೋಂದಾಯಿತರಿಗೆ ಇಪ್ಪತ್ತು ಪಾಠಾವಳಿ ಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಸದ್ಯ 39ನೇ ತಂಡದ ತರಬೇತಿಯು ಜನವರಿ ತಿಂಗಳಿನಿಂದ ಆರಂಭ ವಾಗಲಿದ್ದು, ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಐದು ರೂ. ಅಂಚೆಚೀಟಿ ಸಹಿತ ಸ್ವ-ವಿಳಾಸ ಹೊಂದಿದ ಲಕೋಟೆಯನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು-570006, ದೂ.ಸಂಖ್ಯೆ: 0821-2345128 ಇವರಿಗೆ ಕಳುಹಿಸಿಕೊಡಬಹುದು ಎಂದು ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯ ಪ್ರಭಾರಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.