×
Ad

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

Update: 2025-11-09 15:32 IST

ಕಾರ್ಕಳ: ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆಯು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾತನಾಡಿ, ಈ ಮಹೋತ್ಸವವನ್ನು ನಾಡಹಬ್ಬದ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಆಚರಿಸಬೇಕಾಗಿದ್ದು, ಮಹಾಮಸ್ತಕಾಭಿಷೇಕದ ಮುನ್ನ ಸಾಕಷ್ಟು ಪೂರ್ವ ತಯಾರಿಗಳು ಆಗಬೇಕಾಗಿದೆ.

ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಕೇವಲ ಮಹಾಮಸ್ತಕಾಭಿಷೇಕ ಮಾತ್ರ ನಡೆಯದೇ ಸಾರ್ವಜನಿಕರಿಗೂ ಪ್ರಯೋಜನವಾಗುವ, ಅವರು ನೆನಪಿಡುವಂತಹ ಕಾಮಗಾರಿಗಳಾಗಬೇಕು. ಬಾಹುಬಲಿ ಬೆಟ್ಟ ಹಾಗೂ ಕಾರ್ಕಳ ಪರಿಸರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕೆಲಸಕ್ಕಾಗಿ ಲೋಕೋಪಯೋಗಿ, ಪ್ರವಾಸೋದ್ಯಮ, ಪುರಾತತ್ವ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಹಾಗೂ ಪುರಸಭೆಯಿಂದ ಶಾಶ್ವತ ಮೂಲಭೂತ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ 20 ಕೋಟಿ ರೂ. ಅನುದಾನದ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಮುಂದೆ ಸಭೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸಿ ಮಹೋತ್ಸವದ ವಿವಿಧ ಚಟುವಟಿಕೆಗಳ ಜವಾಬ್ದಾರಿಗಳನ್ನು ನೀಡಲಾಗುವುದು. ಈ ಮಹೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಪುರಾತತ್ವ ಇಲಾಖೆಯಿಂದ ಬಾಹುಬಲಿ ಸ್ವಾಮಿಯ ವಿಗ್ರಹ, ಚತುರ್ಮುಖ ಬಸದಿ, ಹಿರಿಯಂಗಡಿಯ ಮಾನಸ್ತಂಬ ಹಾಗೂ ಇನ್ನಿತರ ಪುರಾತತ್ವ ಇಲಾಖೆಯ ಸ್ಥಳಗಳ ಸ್ವಚ್ಛತೆ ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಪುರಾತತ್ವ ಇಲಾಖೆಯ ಅಧಿಕಾರಿಗಳು ಬಾಹುಬಲಿ ಬೆಟ್ಟಕ್ಕೆ ತೆರಳಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಎಸ್.ಅನಂತರಾಜ್ ಪೂವಣಿ, ಕೋಶಾಧಿಕಾರಿ ಡಾ.ಜೀವಂಧರ ಬಲ್ಲಾಳ್, ಪುರಾತತ್ವ ಇಲಾಖೆಯ ಹಿರಿಯ ಸಂರಕ್ಷಣಾಧಿಕಾರಿ ಸೂರಜ್, ಸ್ಮಾರಕ ಸಂರಕ್ಷಕ ಆನಂದ ನಾಯಕ್, ಜೈನ ಸಮಾಜದ ಪ್ರಮುಖರಾದ ಆಂಡಾರು ಮಹಾವೀರ ಜೈನ್, ಪುಷ್ಪರಾಜ್ ಜೈನ್, ಪ್ರಭಾತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News