ಕಾರ್ಕಳ| ಜನಾಗ್ರಹ ಸಭೆಯಲ್ಲಿ ಪ್ರಚೋದನಕಾರಿ ಭಾಷಣ: ರವೀಶ ತಂತ್ರಿ ಕುಂಟಾರು ವಿರುದ್ಧ ಪ್ರಕರಣ ದಾಖಲು
Update: 2025-09-11 18:45 IST
ಕಾರ್ಕಳ, ಸೆ.11: ಕುಕ್ಕುಂದೂರು ಗ್ರಾಮ ಪಂಚಾಯತ್ ಎದುರಿನ ಮೈದಾನದಲ್ಲಿ ಸೆ.10ರಂದು ಕಾರ್ಕಳ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ನಡೆದ ಜನಾಗ್ರಹ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕೇರಳ ಹಿಂದೂ ಐಕ್ಯ ವೇದಿಕೆಯ ರವೀಶ ತಂತ್ರಿ ಕುಂಟಾರು ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಭೆಯಲ್ಲಿ ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣಗಾರರಾಗಿ ಭಾಗವಹಿಸಿದ್ದು, ಇವರು ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಉದ್ದೇಶ ಪೂರ್ವಕವಾಗಿ ಶಾಂತಿಭಂಗ ಕೃತ್ಯದಲ್ಲಿ ತೊಡಗಿ ದ್ವೇಷ, ಅಸೂಯೆ, ವೈಮನಸ್ಸು, ಶತ್ರುತ್ವಕ್ಕೆ ಪ್ರಚೋದನೆ ನೀಡಿ ದ್ವೇಷಪೂರಿತ ಭಾಷಣ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ. 353(2) 196(1)(ಎ) ಬಿಎನ್‌ಎಸ್‌ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.