ಕಾರ್ಕಳ : ಕೆ.ಎಂ.ಇ.ಎಸ್. ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಗಡಿಯಲ್ಲಿ ಸೈನಿಕರು ಕಾವಲು ಕಾಯುವುದರಿಂದ ನಾವಿಂದು ನೆಮ್ಮದಿಯಲ್ಲಿದ್ದೇವೆ: ಗೋಪಾಲಕೃಷ್ಣ ಗೋರೆ
ಕಾರ್ಕಳ: ದೇಶದ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದರಿಂದಲೇ ನಾವು ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿದೆ ಎಂದು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಗೋಪಾಲಕೃಷ್ಣ ಗೋರೆ ಹೇಳಿದರು.
ಅವರು ಕಾರ್ಕಳದ ಕೆ.ಎಂ.ಇ.ಎಸ್. ವಿದ್ಯಾ ಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಡಿ ಪ್ರದೇಶದಲ್ಲಿ ದೇಶದ ರಕ್ಷಣೆಗೆ ನಿಯೋಜಿತರಾಗಿರುವ ಸೈನಿಕರು ನಿಜವಾದ ಹೀರೋಗಳು. ಅವರ ತ್ಯಾಗದಿಂದಲೇ ದೇಶ ಸುರಕ್ಷಿತವಾಗಿದೆ. ಭಾರತ ಇಂದು ವೇಗವಾಗಿ ಮುನ್ನಡೆಯುತ್ತಿರುವ ರಾಷ್ಟ್ರವಾಗಿದ್ದು, ಜಾತಿ–ಮತ–ಧರ್ಮಗಳ ಸಾಮರಸ್ಯದಿಂದಲೇ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ಅವರು, ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ. ‘ಆತ್ಮನಿರ್ಭರ ಭಾರತ’ ಹಾಗೂ ‘ವಂದೇ ಮಾತರಂ’ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ವೈಶಿಷ್ಟ್ಯಗಳಾಗಿವೆ. ಸೈನ್ಯದಲ್ಲಿ ನಮ್ಮ ದೇಶ ಬಲಿಷ್ಠವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾರತೀಯ ಸೈನ್ಯವನ್ನು ಸೇರಿ ದೇಶದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವಾ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸುರಕ್ಷ ಸ್ವಾಗತಿಸಿದರು. ತಿಲಕ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ಪದ್ಮಪ್ರಿಯ ಕಾರ್ಯಕ್ರಮ ನಿರ್ವಹಿಸಿದರು.