×
Ad

ಕಾರ್ಕಳ: ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿಯೂ ಮೃತ್ಯು

Update: 2023-06-25 14:48 IST

ಕಾರ್ಕಳ, ಜೂ. 25: ಕ್ಷುಲ್ಲಕ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗಿದ್ದು, ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಇಂದು (ರವಿವಾರ) ಕಾರ್ಕಳ ತಾಲೂಕು ನಲ್ಲೂರಿನಲ್ಲಿ ವರದಿಯಾಗಿದೆ.

ಯಲ್ಲಾಪುರ ಮೂಲದ ಇಮ್ಯಾನುಲ್‌ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ ಎಂದು ಗುರುತಿಸಲಾಗಿದೆ. 

ರವಿವಾರ ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್‌ ಕೂಡ ನೀರುಪಾಲಾದರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್‌, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.

ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ತೇಜಸ್ವಿ, ಪೊಲೀಸರಾದ ಪ್ರಕಾಶ್‌, ಸುಭಾಶ್‌ ಕಾಮತ್‌, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮೃತದೇಹ ಮೇಲಕ್ಕೆತ್ತಿದ್ದ ಸ್ಥಳೀಯರು

ಗ್ರಾಮ ಪಂಚಾಯತ್‌ ಸದಸ್ಯರಾದ ಸುಮಿತ್‌ ನಲ್ಲೂರು ಹಾಗೂ ಲೋಕೇಶ್‌ ಶೆಟ್ಟಿ, ಸ್ಥಳೀಯರಾದ ಹರಿಪ್ರಸಾದ್‌ ಬಜಗೋಳಿ, ಶಿವಣ್ಣ ನಲ್ಲೂರು, ನಾರಾಯಣ ಗೌಡ ಅವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ನಲ್ಲೂರು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗೇಶ್‌, ಸ್ಥಳೀಯರಾದ ಜಯರಾಮ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ಘಟನಾ ಸ್ಥಳಕ್ಕಾಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News