×
Ad

ಉಡುಪಿ | ಮಧ್ಯವರ್ತಿಗಳ ಪ್ರವೇಶ ನಿರ್ಬಂಧಿಸುವ ಫಲಕ ಅಳವಡಿಕೆ: ಕೆಡಿಪಿ ಸಭೆಯಲ್ಲಿ ಶಾಸಕರಿಂದ ಅಧಿಕಾರಿಗಳಿಗೆ ಸೂಚನೆ

Update: 2025-12-01 19:28 IST

ಉಡುಪಿ: ಉಡುಪಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಯಶ್ಪಾಲ್ ಎ.ಸುವರ್ಣ ತಿಳಿಸಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಅದಾಲತ್ ನಲ್ಲಿ ಪ್ರತೀ ಕಡತಗಳ ವಿವರ ನೀಡಬೇಕು. ಪ್ರಾಧಿಕಾರದಲ್ಲಿರುವ ಸಿಬಂದಿ ಕೊರತೆ ಸಹಿತ ಇತರ ಸಮಸ್ಯೆಗಳಿದ್ದರೆ ಪಟ್ಟಿ ಮಾಡಿ ನೀಡಿದರೆ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ನಡೆಸಲಾಗುವುದು. ಹಣದ ಆಸೆಗಾಗಿ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡದೆ ತ್ವರಿತವಾಗಿ ಮಾಡಿಕೊಡಬೇಕು ಎಂದು ಶಾಸಕರು ತಿಳಿಸಿದರು.

ರಸ್ತೆ ಹೊಂಡ ಮುಚ್ಚಲು ಸೂಚನೆ ರಸ್ತೆಗಳ ಪ್ಯಾಚ್ ವರ್ಕ್, ರಸ್ತೆ ಬದಿಯ ಜಂಗಲ್ ಕಟ್ಟಿಂಗ್ ಮತ್ತು ಹೂಳೆತ್ತುವಂತಹ ರಸ್ತೆಗಳ ನಿರ್ವಹಣೆ ಕಾಮಗಾರಿಗಳ ಬಗ್ಗೆ ಪರಿಶೀಲಿಸಬೇಕು. ಇಲಾಖೆಯ ರಸ್ತೆಗಳು ಬಹುತೇಕ ಎಲ್ಲ ಕಡೆಗಳಲ್ಲಿ ಹಾಳಾಗಿದ್ದು, ಅವುಗಳ ಬಗ್ಗೆ ಸರ್ವೆ ನಡೆಸಿ ಶೀಘ್ರದಲ್ಲಿ ನಿರ್ವಹಣೆ ಮಾಡಬೇಕು. ಮರ ಹಾಗೂ ಅದರ ಗೆಲ್ಲುಗಳ ನೀರು ರಸ್ತೆಗೆ ಬಿದ್ದು ಹಾಳಾಗುತ್ತಿದ್ದು, ಆ ರೀತಿ ಆಗದಂತೆ ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಕ್ರಮ ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ರೇಷನ್ ಕಾರ್ಡ್ ಸಮಸ್ಯೆ: ರೇಷನ್ ಕಾರ್ಡ್ ಸಮಸ್ಯೆ ಬಗೆಹರಿಸಿ ಹೊಸ ರೇಷನ್ ಕಾರ್ಡ್ ಮಾಡಲು ಅವಕಾಶವಿಲ್ಲದೆ ವರ್ಷವೇ ಕಳೆದಿದೆ. ಆದರೆ ತುರ್ತು ವೈದ್ಯಕೀಯ ನೆಲೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೂ ಈಗಾಗಲೇ ಬಾಕಿ ಇರುವ 22 ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಶಾಸಕರು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಸಿಬಂದಿ ಕೊರತೆ ಆರೋಗ್ಯ ಇಲಾಖೆಯಲ್ಲಿ ಪ್ಯಾರಾ ಮೆಡಿಕಲ್ ಸಿಬಂದಿ ಹಾಗೂ ಪುರುಷ ನಿರೀಕ್ಷಕರುಗಳ ಹುದ್ದೆಗಳು ಖಾಲಿ ಇರುವುದಾಗಿ ವೈದ್ಯಾಧಿಕಾರಿ ಸಭೆಗೆ ತಿಳಿಸಿದರು. ಖಾಲಿ ಹುದ್ದೆ ಭರ್ತಿ ಮಾಡುವ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದರು.

ಎಲ್ಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಶಾ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ಗೌರವಧನ ಪಾವತಿಸಲು ಕ್ರಮ ವಹಿಸಬೇಕು. ಬಾಕಿ ಇದ್ದಲ್ಲಿ ಅವುಗಳನ್ನು ಕೂಡಲೇ ಪಾವತಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಎಸೆಸೆಲ್ಸಿಯಲ್ಲಿ ಕಳೆದ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಈ ಬಾರಿಯೂ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಬರುವಂತೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮೂರು ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿಯನ್ನು ವಿತರಿಸಲಾಯಿತು. ಉಡುಪಿ ತಾ.ಪಂ.ಆಡಳಿತಾಧಿಕಾರಿ ರಶ್ಮಿ, ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಹಶೀಲ್ದಾರ್ ಗುರುರಾಜ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು.

ಕಂದಾಯ -ಅರಣ್ಯ ಇಲಾಖೆ ಜಂಟಿ ಸಮೀಕ್ಷೆ

ಅರಣ್ಯ ಮತ್ತು ಕಂದಾಯ ಇಲಾಖೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು. ಡೀಮ್ಡ್ ಫಾರೆಸ್ಟ್ ಇರುವ ಸ್ಥಳದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿ ಕಂದಾಯ ಭೂಮಿ ಹಸ್ತಾಂತರಿಸಲು ಕ್ರಮವಹಿಸಬೇಕು ಎಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಯಶ್‌ಪಾಲ್ ಸುವರ್ಣ ಸಭೆಯಲ್ಲಿ ತಿಳಿಸಿದರು.

ಬಡವರು ಮನೆ ನಿರ್ಮಿಸಲು ಕಟ್ಟಲು ಹಾಗೂ ಕೆಲವೊಂದು ಸರಕಾರಿ ಕಟ್ಟಡಗಳಿಗೂ ಡೀಮ್ಡ್ ಫಾರೆಸ್ಟ್ ನೆಪವೊಡ್ಡಿ ಅಡ್ಡಿಪಡಿಸಲಾಗುತ್ತಿದೆ. ಮಾರ್ಗಸೂಚಿ ಪ್ರಕಾರ 120 ಮರಗಳಿದ್ದರಷ್ಟೇ ಡೀಮ್ಡ್ ಫಾರೆಸ್ಟ್ ಎಂಬುದು ಘೋಷಿಸಲಾಗುತ್ತದೆ. ಇದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಅನಗತ್ಯ ಗೊಂದಲ ಉಂಟುಮಾಡಬಾರದೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News