×
Ad

ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಕೊಲೆ ಪ್ರಕರಣ: ಉಡುಪಿ ಜಿಲ್ಲಾದ್ಯಂತ 650ಕ್ಕೂ ಅಧಿಕ ವೈದ್ಯರಿಂದ ಮುಷ್ಕರ ಆರಂಭ

Update: 2024-08-17 11:31 IST

ಉಡುಪಿ, ಆ.16: ಕೊಲ್ಕತ್ತಾದಲ್ಲಿನ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ವೈದ್ಯರು ಇಂದು ಬೆಳಗ್ಗೆ 6ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳನ್ನು ಮುಚ್ಚಿ ಮುಷ್ಕರ ಆರಂಭಿಸಿದ್ದಾರೆ.

ಕೊಲ್ಕತ್ತಾ ಘಟನೆಯನ್ನು ಖಂಡಿಸಿ ಐಎಂಎ ಉಡುಪಿ ಕರಾವಳಿ ಶಾಖೆಯ ವ್ಯಾಪ್ತಿಯ ಸುಮಾರು 260 ಮಂದಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಆ.17ರ ಬೆಳಗ್ಗೆ 6ಗಂಟೆಯಿಂದ 18ರ ರವಿವಾರ ಬೆಳಗ್ಗೆ 6ಗಂಟೆಯವರೆಗೆ ಒಟ್ಟು 24 ಗಂಟೆಗಳ ಕಾಲ ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಇತರ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಐಎಂಎ ಅಧೀನದಲ್ಲಿ ಒಟ್ಟು 550ಕ್ಕೂ ಅಧಿಕ ವೈದ್ಯರಿದ್ದು, ಅವರೆಲ್ಲ ಇಂದಿನಿಂದ ಮುಷ್ಕರ ನಡೆಸುತ್ತಿದ್ದಾರೆ. ತಮ್ಮ ಹೊರರೋಗಿ ವಿಭಾಗವನ್ನು ಸ್ಥಗಿತಗೊಳಿಸಿದ್ದು, ತುರ್ತು ಚಿಕಿತ್ಸೆಯ ಸೇವೆಯನ್ನು ನೀಡಲಿದ್ದಾರೆ. ಇದರೊಂದಿಗೆ ಸರಕಾರಿ ವೈದ್ಯರು ಕೂಡ ನಮ್ಮ ಜೊತೆ ಕೈಜೋಡಿಸಿ ಹೊರರೋಗಿ ವಿಭಾಗವನ್ನು ಇಂದು ಸ್ಥಗಿತಗೊಳಿಸಿದ್ದಾರೆ ಐಎಂಎ ಉಡುಪಿ ಜಿಲ್ಲಾ ಸಂಯೋಜಕ ಡಾ.ವಾಸುದೇವ್ ತಿಳಿಸಿದ್ದಾರೆ.

ಅದೇ ರೀತಿ ಈ ಮುಷ್ಕರಕ್ಕೆ ಭಾರತೀಯ ದಂತ ವೈದ್ಯ ಸಂಘ ಉಡುಪಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಇದರ 125 ಸದಸ್ಯರು ಕೂಡ ಇಂದು ಬೆಳಗ್ಗೆಯಿಂದ ತಮ್ಮ ದಂತ ವೈದ್ಯಕೀಯ ಚಿಕಿತ್ಸಾಲಯಗಳನ್ನು ಮುಚ್ಚಿದ್ದಾರೆ. ನಮ್ಮ ಸಂಘದ ಎಲ್ಲ ಸದಸ್ಯರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ತುರ್ತು ಚಿಕಿತ್ಸೆ ಹೊರತು ಪಡಿಸಿ ಹೊರರೋಗ ವಿಭಾಗಗಳಲ್ಲಿ ಯಾವುದೇ ಸೇವೆಯನ್ನು ನೀಡುತ್ತಿಲ್ಲ ಎಂದು ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ.ಅತುಲ್ ಯು.ಆರ್. ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News