×
Ad

ಒಳ ಮೀಸಲಾತಿ ವಿಚಾರದಲ್ಲಿ ಕೊರಗ ಸಮುದಾಯ ಒಗ್ಗೂಡಬೇಕು: ಜಯಪ್ರಕಾಶ್ ಹೆಗ್ಡೆ

ಕೊರಗ ಸಮುದಾಯದವರಿಗೆ ಒಳಮೀಸಲಾತಿ ಹೋರಾಟ ಸಭೆ

Update: 2025-10-13 16:55 IST

ಕುಂದಾಪುರ : ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಕೊರಗ ಸಮುದಾಯ ಈಗಾಗಲೇ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಈಗಾಗಲೇ ಬಹುತೇಕ ಬೇರೆ ಬೇರೆ ಸಮುದಾಯದ ಜನಾಂಗದವರು ಜನಸಂಖ್ಯೆಯಲ್ಲಿ ಪ್ರಾಬಲತ್ಯೆಯನ್ನು ಕಂಡಿರುವ ನಿಟ್ಟಿನಲ್ಲಿ ಸರಕಾರದ ಸವಲತ್ತುಗಳನ್ನು ಅವರೇ ಹೆಚ್ಚು ಪಡೆದುಕೊಂಡಿರುತ್ತಾರೆ. ಒಳ ಮೀಸಲಾತಿ ವಿಚಾರದಲ್ಲಿ ಕೊರಗ ಸಮುದಾಯ ಒಗ್ಗೂಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಕುಂಭಾಸಿಯಲ್ಲಿರುವ ಮಕ್ಕಳ ಮನೆಯಲ್ಲಿ ರವಿವಾರ ಜರಗಿದ ಕೊರಗ ಸಮುದಾಯದವರಿಗೆ ಒಳಮೀಸಲಾತಿಗೆ ಹೋರಾಟ ನಡೆಸುವ ಕುರಿತ ರೂಪು-ರೇಷೆಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಇಂದು ಶಿಕ್ಷಣದಿಂದ ಕೊರಗ ಸಮುದಾಯ ಬದಲಾವಣೆಯ ಜೊತೆಗೆ ಅಭಿವೃದ್ಧಿ ಕಾಣುತ್ತಿದೆ. ವಿದ್ಯಾಭ್ಯಾಸದಿಂದ ಉದ್ಯೋಗವಕಾಶ ಲಭಿಸುತ್ತದೆ. ಸರಕಾರ ಈಗಾಗಲೇ ಪರಿಶಿಷ್ಟ ಜಾತಿಯವರಿಗೆ ನೀಡಿದ ಒಳ ಮೀಸಲಾತಿಯನ್ನು ಕೊರಗ ಸಮುದಾಯಕ್ಕೂ ಕೂಡ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಮಾತನಾಡಿ, ನೈಜ ದುರ್ಬಲ ಪರಿಶಿಷ್ಟ ವರ್ಗ ಎಂದು ಈಗಾಗಲೇ ಸರಕಾರ ಕೊರಗ ಜನಾಂಗವನ್ನು ಗುರುತಿಸಲ್ಪಟ್ಟಿದೆ. ಕರ್ನಾಟಕದಲ್ಲಿ ಈಗಾಗಲೇ 45 ಲಕ್ಷ ಬುಡಕಟ್ಟು ಜನಾಂಗಗಳಿದ್ದು, ಈ ಪೈಕಿ ಕೇವಲ 45 ಸಾವಿರ ಕೊರಗ ಸಮುದಾಯದ ಜನಸಂಖ್ಯೆ ಇದೆ. ಈ ಅಂಕಿ ಅಂಶದ ಆಧಾರದ ಮೇಲೆ ನಮ್ಮ ಕೊರಗ ಸಮುದಾಯ ಯಾವುದೇ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಪ್ರಸ್ತುತ ದಿನದಲ್ಲಿ 12 ಸಾವಿರಕ್ಕೆ ನಮ್ಮ ಜನಸಂಖ್ಯೆ ಇಳಿದು ಬಹುತೇಕ ಸಮುದಾಯವು ಅಳಿವಿನಂಚಿನಲ್ಲಿದೆ. ಒಂದು ಕಡೆಯಿಂದ ಸಮಾಜ ಕುಂಠಿತಗೊಳ್ಳುತ್ತಿದ್ದರೆ ಇನ್ನೊಂದು ಕಡೆಯಿಂದ ವಿದ್ಯಾಭ್ಯಾಸದಲ್ಲಿ ಮುಂದುವರಿದ ಯುವ ಸಮೂಹ ಉದ್ಯೋಗವಕಾಶವಿಲ್ಲದೇ ಕಲಿತು ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದರಿಂದ ನಮ್ಮ ಸಮಾಜಕ್ಕೊಂದು ಒಳಮೀಸಲಾತಿಯನ್ನು ಸರಕಾರ ನೀಡಬೇಕು ಎಂದರು.

ಕೊರಗ ಸಮುದಾಯದ ಮುಖಂಡರಾದ ಬಾಲರಾಜ್ ಮಂಗಳೂರು, ಡಾ.ದಿನಕರ ಕೆಂಜೂರು, ಗಣೇಶ್ ವಿ.ಕುಂದಾಪುರ, ಕುಮಾರ ದಾಸ್ ಹಾಲಾಡಿ, ಮುತ್ತಾಡಿ ಮಂಗಳೂರು, ಡಾ.ಬಾಬು ಬಂಟ್ವಾಳ, ಗಣೇಶ್ ಬಾರ್ಕೂರು, ಲಕ್ಷ್ಮಣ ಬೈಂದೂರು, ಬೊಗ್ರ ಕೊರಗ ಕೊಕ್ಕರ್ಣೆ, ಬಾಬು ಪಾಂಗಳ, ಗೌರಿ ಕೆಂಜೂರು, ವಸಂತ ಉಡುಪಿ, ವಿಜಯ ಕಿನ್ನಿಮೂಲ್ಕಿ, ಸುನೀಲ್ ಕಲ್ಯಾಣಪುರ, ಶಿವರಾಜ ನಾಡ, ಚಂದ್ರ ಹೇರೂರು ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಸಮಾಲೋಚಿಸಿದರು.

ಮಕ್ಕಳ ಮನೆಯ ಮುಖ್ಯಸ್ಥ ಗಣೇಶ್ ವಿ.ಕುಂದಾಪುರ ಸ್ವಾಗತಿಸಿದರು. ಶೇಖರ ಮರಂವತೆ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಮನೆಯ ಮುಖ್ಯ ಶಿಕ್ಷಕಿ ವಿನಿತಾ ಪಡುಕೋಣೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News