×
Ad

ಕುಕ್ಕುಂದೂರು: ಡಿ.13ರಂದು ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ 42ನೇ ವಾರ್ಷಿಕೋತ್ಸವ

ವಾರ್ಷಿಕೋತ್ಸವದ ಬ್ಯಾನರ್ ಅನಾವರಣ

Update: 2025-12-06 12:39 IST

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡುತ್ತಿರುವ ಪ್ರತಿಷ್ಠಿತ ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆ ಇದೀಗ 42ನೇ ವಾರ್ಷಿಕೋತ್ಸವದ ಸಡಗರಕ್ಕೆ ಸಜ್ಜಾಗಿದೆ.

ಡಿ.13ರಂದು ಸಂಭ್ರಮದ ವಾರ್ಷಿಕೋತ್ಸವ ಜರುಗಲಿದೆ. ವಾರ್ಷಿಕೋತ್ಸವದ ಬ್ಯಾನರ್ ಅನಾವರಣ ಕಾರ್ಯಕ್ರಮ ಶನಿವಾರ (ಡಿ.6ರಂದು) ನಡೆದಿದೆ. ವಾರ್ಷಿಕೋತ್ಸವದ ಪ್ರಯುಕ್ತ ಡಿ.10ರಂದು ವಿಜ್ಞಾನ ಮಾದರಿಗಳ ಅನ್ವೇಷಣೆ ಪ್ರದರ್ಶನ ಮತ್ತು ವ್ಯಾಪಾರ ಉತ್ಸವ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಸಮಾರಂಭವಾದ ಕೆ.ಎಂ.ಇ.ಎಸ್ ಪರ್ವ ಡಿ.13ರಂದು ಅಪರಾಹ್ನ 3:30ಕ್ಕೆ ಜರುಗಲಿದೆ. ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್., ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಅಧೀನದ ಜ್ಞಾನಸುಧಾ ವಿದ್ಯಾಸಂಸ್ಥೆಯ ಪಿಆರ್ ಒ ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳದ ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆಯ ಸಿಇಒ ಆಶಿಷ್ ಶೆಟ್ಟಿ, ಮತ್ತು ಕಾಲೇಜಿನ ಪೂರ್ವ ವಿದ್ಯಾರ್ಥಿ, ಕುಶಾಲನಗರದ ಸರಕಾರಿ ಆಯುರ್ವೇದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಸಲಹೆಗಾರ್ತಿ ಡಾ.ಅಷಿತಾ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್, ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ನವಾಲ್ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಕಾಲೇಜಿನ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್, ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪಾಟ್ಕರ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೊಲಿಟಾ ಝೀನಾ ಡಿಸಿಲ್ವ ಮನವಿ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ

ಕುಕ್ಕುಂದೂರು ಪರಿಸರದಲ್ಲಿ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಲ್ಪಟ್ಟ ಕೆಎಂಇಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವ ವಿದ್ಯಾದೇಗುಲವಾಗಿದೆ. ಇದು ಹಿರಿಯರಾದ ಹಾಜಿ ಪಿ.ಎಂ.ಖಾನ್, ಕೆ.ಎಸ್.ನಝೀರ್ ಅಹ್ಮದ್ ಮತ್ತು ಹಾಜಿ ಎ.ಎಸ್.ರಶೀದ್ ಹೈದರ್ ಅವರ ಕನಸುಗಳ ಫಲವಾಗಿದೆ.

ಆಂಗ್ಲ ಮಾಧ್ಯಮ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಕೂಡಾ ಅಂತಹ ಶಿಕ್ಷಣ ಪಡೆಯಬೇಕು ಮತ್ತು ಔದ್ಯೋಗಿಕವಾಗಿ ಸರಿಸಮಾನ ಅವಕಾಶಗಳು ಅವರಿಗೂ ಲಭಿಸುವಂತಾಗಬೇಕು ಎಂಬ ಧ್ಯೇಯದೊಂದಿಗೆ ಸ್ಥಾಪಿಸಲ್ಪಟ್ಟ ಶಿಕ್ಷಣ ಸಂಸ್ಥೆಯಾಗಿದೆ.

ಹಿರಿಯರಾದ ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ ಕೆ.ಎಸ್.ಮುಹಮ್ಮದ್ ಮಸೂದ್ ಅವರ ನಿರಂತರ ಮಾರ್ಗದರ್ಶನ ಹಾಗೂ ಖ್ಯಾತ ಅನಿವಾಸಿ ಉದ್ಯಮಿ ಕೆ.ಎಸ್.ನಿಸಾರ್ ಅಹ್ಮದ್ ಅವರ ನಿಸ್ವಾರ್ಥ ಸೇವೆ, ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಉದ್ಯಮಿ ಕೆ.ಎಸ್.ಇಮ್ತಿಯಾಝ್ ಅಹ್ಮದ್ ರವರ ನಿರಂತರ ಶ್ರಮ, ಪರಿಶ್ರಮ, ಸಮಾಜ ಸೇವಾ ಪ್ರವೃತ್ತಿಯಿಂದಾಗಿ ಸಂಸ್ಥೆ ಇಂದು ವಿಶಾಲವಾಗಿ ವಿಸ್ತರಿಸಿದೆ.

ಬದಲಾದ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಮೂಹದ ಸರ್ವ ಅವಶ್ಯಕತೆಗಳನ್ನು ಪೂರೈಸಲು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಉದ್ದೇಶಿಸಿದ್ದ ಶೈಕ್ಷಣಿಕ ಪರಿವರ್ತನೆ ಅವರ ಅಣ್ಣ ಕೆ.ಎಸ್.ನಿಸಾರ್ ಅಹ್ಮದ್ ಸಹಕಾರದಲ್ಲಿ ಸಾಧ್ಯವಾಗಿದ್ದು, ಸಂಸ್ಥೆ ಹೊಸ ಚೈತನ್ಯ ಪಡೆದಿದೆ. ವಿದ್ಯಾರ್ಥಿಗಳಿಗೆ ಆಧುನಿಕ ಅವಶ್ಯಕತೆಗಳಿಗೆ ತಕ್ಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News