ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಬೆಂಗಳೂರು ದರೋಡೆ ಕುರಿತು ವಿಜಯೇಂದ್ರ ಟೀಕೆ
"ರಾಜ್ಯದಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆ ಆಗುತ್ತಿಲ್ಲ"
ಉಡುಪಿ: ಬೆಂಗಳೂರಿನಲ್ಲಿ ಹಾಡುಹಗಲೇ ದರೋಡೆ ನಡೆದಿದೆ. ಇದೇ ರೀತಿಯ ದರೋಡೆ ಬೀದರ್‌ನಲ್ಲೂ ನಡೆದಿತ್ತು. ಅದಕ್ಕೆ ಇನ್ನೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಿಗೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಇರುವುದಿಲ್ಲ. ಗೃಹ ಸಚಿವರು ಅಸಹಾಯಕರಾಗಿದ್ದಾರೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಮೂರು ತಿಂಗಳಿಂದ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸುತ್ತಿದ್ದೇನೆ. ಅವರು ಬಹಳ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ. ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿ ಕುರ್ಚಿಗೆ ದಿನೇ ದಿನೇ ಪೈಪೋಟಿ ಹೆಚ್ಚಾಗುತ್ತಿದೆ. ಅಭಿವೃದ್ಧಿ ಇಲ್ಲದೆ ರಾಜ್ಯದ ಜನ ಪರದಾಡುತ್ತಿದ್ದಾರೆ ಎಂದು ಟೀಕಿಸಿದರು.
ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ ಎಂಬುದೇ ಮರೆತು ಹೋಗಿದೆ. ಬಡವ ರೈತ, ಹಿಂದು ವಿರೋಧಿ ಸರಕಾರ ರಾಜ್ಯದಲ್ಲಿದೆ. ಎಷ್ಟು ಬೇಗ ಈ ಸರಕಾರ ಕಿತ್ತು ಹಾಕಿದರೆ ಅಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ನವೆಂಬರ್ ಕ್ರಾಂತಿಯ ಬಗ್ಗೆ ಆಡಳಿತ ಪಕ್ಷದ ಸಚಿವರು, ಶಾಸಕರೇ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆ ಆಗುತ್ತಿಲ್ಲ. ಕ್ರಾಂತಿಗಳ ಬಗ್ಗೆ ಮಾತನಾಡುತ್ತ ಕೂತಿದ್ದಾರೆ. ಆಡಳಿತ ಪಕ್ಷದ ಸಚಿವರ ಹೇಳಿಕೆ ಗಮನಿಸಿದರೆ ಅರ್ಧದಷ್ಟು ಸಚಿವರು ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ ಎಂದರು.
ವೋಟು ಚೋರಿ ಬಗ್ಗೆ ಬಹಳವಾಗಿ ಪ್ರಚಾರ ಮಾಡಿದ್ದ ರಾಹುಲ್ ಗಾಂಧಿ ಬಿಹಾರ ಚುನಾವಣೆ ಫಲಿತಾಂಶ ನಂತರ ನಾಪತ್ತೆಯಾಗಿದ್ದಾರೆ. ಇಂತಹ ಫಲಿತಾಂಶವನ್ನು ರಾಹುಲ್ ಗಾಂಧಿ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಬಿಹಾರದ ಜನ ರಾಹುಲ್ ಗಾಂಧಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ರಾಹುಲ್ ಗಾಂಧಿ ಎಚ್ಚೆತ್ತುಕೊಂಡು ವಿರೋಧ ಪಕ್ಷದ ಕೆಲಸವನ್ನು ಮಾಡಲಿ ಎಂದು ಅವರು ತಿಳಿಸಿದರು.