ಶಂಕರನಾರಾಯಣ ಅರಣ್ಯದಲ್ಲಿ ಚಿರತೆ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ; ಇಬ್ಬರಿಗಾಗಿ ಶೋಧ
ಶಂಕರನಾರಾಯಣ, ಮೇ 22: ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ ಶೆಟ್ಟಿ, ಕಾವ್ರಾಡಿ ಗ್ರಾಮದ ಕಂಡ್ಲೂರಿನ ನದೀಮ್ ಕರಾಣಿ, ಯಡಮೊಗೆ ಗ್ರಾಮದ ಹನೆಬಚ್ಚಲು ನಿವಾಸಿಗಳಾದ ನಾಗರಾಜ ಭೋವಿ ಹಾಗೂ ವೆಂಕಟರಮಣ ಭೋವಿ ಬಂಧಿತ ಆರೋಪಿಗಳು.
ಬಂಧಿತರಿಂದ ಚಿರತೆಯ 4 ಕಾಲಿನ ಉಗುರು ಹಾಗು ಮೂಳೆಯ ಬಿಡಿ ಭಾಗಗಳು, ಬಂದೂಕು, 5 ಜೀವಂತ ಗುಂಡುಗಳು, ಎರಡು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಾಪುರ-ಶಿವಮೊಗ್ಗ ಜಿಲ್ಲಾ ರಸ್ತೆ ಸಮೀಪ ಫೆ.4ರಂದು ಚಿರತೆಯೊಂದನ್ನು ಹತ್ಯೆಗೈದು ಎಸೆಗಿರುವ ಬಗ್ಗೆ ಶಂಕರನಾರಾಯಣ ವಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ತನಿಖೆ ನಡೆಸಿ ಮೇ 21ರಂದು ಆರೋಪಿ ಮಂಜುನಾಥ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.
ಆತ ನೀಡಿದ ಮಾಹಿತಿಯಂತೆ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತಿದೆ. ಬಂಧಿತ ಆರೋಪಿಗಳನ್ನು ಕುಂದಾಪುರ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ. ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯ ಅಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿ, ಕುಂದಾಪುರ ವಲಯದ ಸಿಬ್ಬಂದಿ, ಬೈಂದೂರು ವಲಯದ ಸಿಬ್ಬಂದಿ ಮತ್ತು ಕಂಡ್ಲೂರು ಗ್ರಾಮಾಂತರ ಪೋಲೀಸ್ ಠಾಣೆಯ ಠಾಣಾಧಿಕಾರಿ ನಿರಂಜನ್ ಗೌಡ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣದ ತನಿಖೆ ಕುಂದಾಪುರ ವಿಭಾಗದ ಹೆಚ್ಚುವರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕ ಪಿ.ಶ್ರೀಧರ್ ಸಮಕ್ಷಮದಲ್ಲಿ ನಡೆದಿದೆ.