ಹೇರೂರು ಚಿಕ್ತಾಡಿಯಲ್ಲಿ ಬೋನಿಗೆ ಬಿದ್ದ ಚಿರತೆ
ಬೈಂದೂರು, ಜ.16: ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಕಾಣಿಸಿಕೊ ಳ್ಳುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾಗಿದೆ.
ಹಲವು ದಿನಗಳಿಂದ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿತ್ತು. ಅದರಂತೆ ಹೇರೂರು ಗ್ರಾಮದ ಚಿಕ್ತಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಅರಣ್ಯ ಅಧಿಕಾರಿಗಳು ಗುರುವಾರ ಬೋನು ಇರಿಸಿದ್ದರು.
ಶುಕ್ರವಾರ ಮುಂಜಾನೆ ಆಹಾರ ಅರಸಿ ಬಂದ ಮೂರು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾ ಧಿಕಾರಿ ಕೆ.ಸದಾಶಿವ, ಗಸ್ತು ಅರಣ್ಯ ಪಾಲಕ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.