ಮಣಿಪಾಲ ಕೆಎಂಸಿಯಲ್ಲಿ ಯಕೃತ್ತು ಕಸಿ ಕ್ಲಿನಿಕ್ ಪ್ರಾರಂಭ: ಯಕೃತ್ತು ಕಸಿಯಲ್ಲಿ ದೇಶಕ್ಕೆ ವಿಶ್ವದಲ್ಲೇ 2ನೇ ಸ್ಥಾನ
ಉಡುಪಿ, ಜ.7: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಣಿಪಾಲ ಹಾಗೂ ಬೆಂಗಳೂರಿನ ತಜ್ಞ ವೈದ್ಯರ ಮೂಲಕ ಸಮಗ್ರ ಯಕೃತ್ತು ಚಿಕಿತ್ಸೆ ಮತ್ತು ಯಕೃತ್ತು ಕಸಿ ಕ್ಲಿನಿಕ್‌ನ್ನು ಪ್ರಾರಂಭಿಸಲಾಗಿದೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಎಚ್‌ಪಿಬಿ ಯಂಡ್ ಲಿವರ್ ಮತ್ತು ಮೇದೋಜ್ಜೀರಕ ಗ್ರಂಥಿಯ (ಪ್ಯಾಂಕ್ರಿಯಾಟಿಕ್) ಕಸಿತಜ್ಞ ಹಾಗೂ ಸಲಹೆಗಾರ ಡಾ.ಜಯಂತ್ ರೆಡ್ಡಿ ತಿಳಿಸಿದ್ದಾರೆ.
ಈ ಕ್ಲಿನಿಕ್‌ನಲ್ಲಿ ದೇಹದ ಪ್ರಮುಖ ಅಂಗವಾಗಿರುವ ಯಕೃತ್‌ನ (ಲಿವರ್) ತಪಾಸಣೆ, ಆರೈಕೆ ಹಾಗೂ ಅಗತ್ಯ ಬಿದ್ದರೆ ಕಸಿ ಸೇವೆ ದೊರೆಯಲಿದೆ. ಈ ಚಿಕಿತ್ಸಾಲಯ ಪ್ರತಿ ತಿಂಗಳ ಮೊದಲ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 4 ರವರೆಗೆ ಕಾರ್ಯಾಚರಿಸಲಿದೆ ಎಂದು ಡಾ.ಜಯಂತ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಮುಂದೆ ಇದಕ್ಕೆ ಸಂಬಂಧಿಸಿದಂತೆ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ತಜ್ಞರ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಆರೈಕೆ ಬೆಂಗಳೂರಿನಂತ ದೂರ ಪ್ರಯಾಣದ ಒತ್ತಡವಿಲ್ಲದೆ ಮಣಿಪಾಲದಲ್ಲೇ ಲಭ್ಯವಾಗಲಿದೆ ಎಂದರು.
ತೀವ್ರ ಮತ್ತು ದೀರ್ಘಕಾಲದ ಯಕೃತ್ತಿನ ಕಾಯಿಲೆ, ಕೊಬ್ಬಿನ ಲಿವರ್ ಕಾಯಿಲೆ, ಸಿರೋಸಿಸ್ ಮತ್ತು ಅದರ ತೊಡಕು ಗಳು, ಯಕೃತ್ತಿನ ಗೆಡ್ಡೆಗಳು ಮತ್ತು ಕ್ಯಾನ್ಸರ್, ಹೆಪಟೋರೆನಲ್ ಸಿಂಡೋಮ್, ಸಂಕೀರ್ಣ ಯಕೃತ್ತಿನ ಅಸ್ವಸ್ಥತೆಗಳು, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುವ ಮಕ್ಕಳು ಇದರ ಪ್ರಯೋಜನ ಪಡೆಯಬಹುದು ಮತ್ತು ಕಸಿ ಮಾಡುವ ಮೊದಲು ಅಥವಾ ನಂತರ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಈ ಕ್ಲಿನಿಕ್ ಉಪಯುಕ್ತವಾಗಲಿದೆ ಎಂದರು.
ಯಕೃತ್ತಿನ ಕಾಯಿಲೆಗಳು ಸಾಮಾನ್ಯವಾಗಿ ರೋಗ ಉಲ್ಬಣಾವಸ್ಥೆ ತಲುಪುವವರೆಗೆ ಸದ್ದಿಲ್ಲದೆ ಮುಂದುವರಿಯುತ್ತದೆ. ಈ ಹಂತದಲ್ಲಿ ಪರೀಕ್ಷಿಸಿಕೊಂಡರೆ ಸೂಕ್ತ ಚಿಕಿತ್ಸೆ ಮೂಲಕ ಪರಿಹಾರ ಕಂಡು ರೋಗಮುಕ್ತವಾಗಬಹುದು. ಅಂತಿಮ ಹಂತದಲ್ಲಿ ಬಂದರೆ ಯಕೃತ್ತಿನ ಕಸಿಯೊಂದೇ ಆಯ್ಕೆಯಾಗಿರುತ್ತದೆ. ಆಧುನಿಕ ತಂತ್ರಜ್ಞಾನದಿಂದ ಇದನ್ನು ಸುಲಭವಾಗಿ ಮಾಡಬಹುದು ಎಂದರು.
ಕರ್ನಾಟಕದಲ್ಲಿ ಈಗ ಯಕೃತ್ತಿನ ಕಸಿಗೆ 3000ರಿಂದ 4000 ಮಂದಿ ರೋಗಿಗಳು ಕಾಯುತಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ 198 ಮಂದಿ ಮಾತ್ರ ಯಕೃತ್ ದಾನಿಗಳು ಸಿಕ್ಕಿದ್ದಾರೆ. ಇಲ್ಲಿ ಜೀವಂತ ದಾನಿಗಳು ಯಕೃತ್ ನೀಡಲು ಮುಂದೆ ಬರುತ್ತಿಲ್ಲ. ದೇಶದಲ್ಲಿ 5000 ಯಕೃತ್ತ್ ಕಸಿಯಲ್ಲಿ 3700ರಿಂದ 4000 ಮಂದಿ ಮಾತ್ರ ದಾನಿಗಳಿಂದ ಪಡೆಯಲಾಗಿದೆ. ಯಕೃತ್ ಕಸಿಯಲ್ಲಿ ದೇಶ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಡಾ.ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಶ್ರುತಿ ಎಚ್. ಎಸ್., ಡಾ.ಗಣೇಶ್ ಭಟ್, ಡಾ. ಶಿರನ್ ಶೆಟ್ಟಿ, ಡಾ. ಸುಧಾಕರ್ ಕಂಟಿಪುಡಿ, ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.