ದ್ವೇಷ ತುಂಬಿದ ಇಂದಿನ ಸಮಾಜದಲ್ಲಿ ಪ್ರೀತಿ ಅಗತ್ಯ: ವಂ.ಕುಮಾರ್ ಸಾಲಿನ್ಸ್
ಮಲ್ಪೆ, ಜ.23: ದ್ವೇಷ, ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಎಂಬ ಹಣತೆಗಳನ್ನು ಹಚ್ಚುವ ಮೂಲಕ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕನ್ನು ಕಾಣುವ ಕೆಲಸ ಇಂದಿನ ಪ್ರಮುಖ ಆದ್ಯತೆಯಾಗಬೇಕು ಎಂದು ಮಲ್ಪೆ ಯುಬಿಎಂ ಚರ್ಚಿನ ವಂ.ಕುಮಾರ್ ಸಾಲಿನ್ಸ್ ಹೇಳಿದ್ದಾರೆ.
ಮಲ್ಪೆ ಸಿಎಸ್‌ಐ ಎಬನೇಜರ್ ಚರ್ಚ್‌ನಲ್ಲಿ ಗುರುವಾರ ಜರಗಿದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯಲ್ಲಿ ಪ್ರಬೋಧನೆ ನೀಡಿ ಅವರು ಮಾತನಾಡುತಿದ್ದರು.
ಬೆಳಕು ನಮ್ಮ ಸುತ್ತಲಿನ ಕತ್ತಲನ್ನು ಕರಗಿಸುತ್ತದೆ. ಯೇಸು ಸ್ವಾಮಿಯು ಮರಣವನ್ನು ಜಯಿಸಿ ಪುನರುತ್ಥಾನದ ಬೆಳಕನ್ನು ನಮಗೆ ನೀಡಿದ್ದಾರೆ. ಅಂತೆಯೇ ನಾವು ಕೂಡ ಕತ್ತಲನ್ನು ತುಂಬಿದ ದುರ್ಬಲರ ಬದುಕಿನಲ್ಲಿ ಹಣತೆ ಹಚ್ಚುವ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೊಜ ತಮ್ಮ ಪ್ರಬೋಧನೆ ಯಲ್ಲಿ, ಪರರನ್ನು ಪ್ರೀತಿಸದ ಮಾನವ ಹೃದಯ ಸ್ಮಶಾನಕ್ಕೆ ಸಮ ಎಂಬಂತೆ ನಾವು ವಸ್ತುಗಳನ್ನು ಪ್ರೀತಿಸುವ ಬದಲು ಮಾನವರನ್ನು ಪ್ರೀತಸುವುದರ ಮೂಲಕ ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಜಗತ್ತಿಗೆ ದಾರಿದೀಪವಾ ಗುವ ಕೆಲಸವನ್ನು ಮಾಡಬೇಕಾಗಿದೆ. ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋಭಾವವನ್ನು ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ಸಮಾಜದಲ್ಲಿ ನಿರ್ಗತಕರನ್ನು ಅನಾಥರನ್ನು ಪ್ರೀತಿಸುವ ಮೂಲಕ ಯೇಸು ಸ್ವಾಮಿ ತೋರಿಸಿದ ದಾರಿಯಲ್ಲಿ ಸಾಗಬೇಕು ಎಂದರು.
ಪ್ರಾರ್ಥನಾ ಕೂಟದ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ವಹಿಸಿದ್ದರು. ಪ್ರಾರ್ಥನಾ ಕೂಟ ದಲ್ಲಿ ವಂ.ಡಾ.ರೋಕ್ ಡಿಸೋಜ, ವಂ.ಜೋನ್ ಫೆರ್ನಾಂಡಿಸ್, ವಂ.ವಿಲ್ಸನ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ, ವಂ.ಜೋಕಿಮ್ ಡಿಸೋಜ, ಸಿಎಸ್‌ಐ ಸಭೆಯ ಉಡುಪಿ ವಲಯ ಮುಖ್ಯಸ್ಥ ವಂ.ಕಿಶೋರ್, ವಂ.ಎಡ್ವಿನ್ ಸೋನ್ಸ್, ತೊಟ್ಟಂ ಚರ್ಚಿನ ಪಾಲನಾ ಸಮಿತಿಯ ಲೆಸ್ಲಿ ಆರೋಜ, ಸಿಸ್ಟರ್ ಸುಶ್ಮಾ, ರೋಮನ್ ಕ್ಯಾಥೊಲಿಕ್, ಸಿಎಸ್‌ಐ ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು.
ಸಿಎಸ್‌ಐ ಎಬನೇಜರ್ ಚರ್ಚ್ ಮಲ್ಪೆ ಪಾಸ್ಟರ್ ವಂ.ವಿನಯ್ ಸಂದೇಶ್ ಸ್ವಾಗತಿಸಿದರು. ಲೂವಿಸ್ ಫೆರ್ನಾಂಡಿಸ್ ವಂದಿಸಿದರು. ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು