ಮಲ್ಪೆ: ಬೋಟಿನಿಂದ ಬಿದ್ದು ಮೀನುಗಾರ ಮೃತ್ಯು
Update: 2025-08-15 19:29 IST
ಸಾಂದರ್ಭಿಕ ಚಿತ್ರ
ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಿಂದ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ನಡೆದಿದೆ.
ಮೃತರನ್ನು ಅಂಕೋಲದ ಶ್ರೀನಿವಾಸ ರಾಮ ತಾಂಡೇಲ (46) ಎಂದು ಗುರುತಿಸಲಾಗಿದೆ. ಆ.13ರಂದು ಬೆಳಗ್ಗೆ ಮಾಣಿ ಕೃಷ್ಣ ಹೆಸರಿನ ಬೋಟಿನಲ್ಲಿ ಒಟ್ಟು 37 ಜನರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೊರಟಿದ್ದು, ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟು ಬಿರುಗಾಳಿಗೆ ಸಿಲುಕಿ ಅಲುಗಾಡಿತ್ತೆನ್ನಲಾಗಿದೆ.
ಈ ವೇಳೆ ಶ್ರೀನಿವಾಸ ರಾಮ ತಾಂಡೇಲ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಮೀನುಗಾರಿಕೆಗೆ ಬಿಡಲಾದ ಬಲೆಯ ಒಳಗೆ ಬಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.