ಹಣ ನೀಡುವಂತೆ ಪೀಡಿಸಿ ಪತ್ನಿಗೆ ಕಿರುಕುಳ: ಪ್ರಕರಣ ದಾಖಲು
ಕುಂದಾಪುರ, ಸೆ.13: ಹಣ ನೀಡುವಂತೆ ಪೀಡಿಸಿ ಪತ್ನಿಗೆ ಪತಿ ಹಾಗೂ ಅವರ ಮನೆಯವರು ಹಿಂಸೆ ನೀಡುತ್ತಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಮಂಗಲಪಾಂಡೆ ರಸ್ತೆಯ ಸುಷ್ಮಾ(26) ಎಂಬವರು ನಿತೀಶ್ ಎನ್. ಎಂಬಾತನನ್ನು 2023ರ ಡಿ.8ರಂದು ವಿವಾಹವಾಗಿದ್ದು, ಬಳಿಕ ಗಂಡನ ಮನೆಯಾದ ಮಂಗಳೂರಿನ ಕುಲಶೇಖರದಲ್ಲಿ ವಾಸವಾಗಿದ್ದರು. ಮದುವೆ ಪೂರ್ವದಲ್ಲಿ ನಿತೀಶ್ ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಮೆಕಾನಿಕಲ್ ಮೇಂಟೆನೆನ್ಸ್ ಇಂಜಿನಿಯರ್ ಎಂದು ಸುಳ್ಳು ಹೇಳಿರುವ ವಿಚಾರ ಬಳಿಕ ಸುಷ್ಮಾಗೆ ತಿಳಿಯಿತು.
ಪತಿ ಹಾಗೂ ಪತಿಯ ಮನೆಯವರು ಸುಷ್ಮಾಗೆ ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದು, ಮನೆ ಕಟ್ಚಲು 60 ಲಕ್ಷ ರೂ. ತೆಗೆದುಕೊಂಡು ಬಾ, ಇಲ್ಲವಾದಲ್ಲಿ ವಿಚ್ಚೇದನ ನೀಡುವುದಾಗಿ ಬೆದರಿಸಿದ್ದರು. ಸೆ.11ರಂದು ನಿತೀಶ್, ಸುಷ್ಮಾರ ತವರು ಮನೆಗೆ ಬಂದು ಅವಾಚ್ಯ ಶಬ್ದದಿಂದ ಬೈದು ಮಾಂಗಲ್ಯವನ್ನು ತೆಗೆಯಲು ಯತ್ನಿಸಿದ್ದು, ಈ ವೇಳೆ ಸುಷ್ಮಾ, ಅವರ ತಂದೆತಾಯಿಯನ್ನು ದೂಡಿರುವುದಾಗಿ ದೂರಲಾಗಿದೆ.