ಉಡುಪಿ, ಅ.26: ಲಾರಿಯಿಂದ ಅನ್‌ಲೋಡ್ ಮಾಡುತ್ತಿದ್ದ ಗಾಜಿನ ಬ್ಲಾಕ್ ಮೈಮೇಲೆ ಬಿದ್ದು ಉಡುಪಿಯ ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ಉಡುಪಿ ಶ್ರೀಕೃಷ್ಣ ಮಠದ ಸಮೀಪದ ನಿವಾಸಿ, ಸಾಮಾಜಿಕ ಕಾರ್ಯಕರ್ತ ಸುನೀಲ್ ಬೈಲಕೆರೆ(45) ಎಂದು ಗುರುತಿಸಲಾಗಿದೆ. ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಗೆ ಲಾರಿಯಲ್ಲಿ ಬಂದಿದ್ದ ಟನ್‌ಗಟ್ಟಲೆ ಭಾರದ ಗಾಜಿನ ಬ್ಲಾಕ್‌ಗಳನ್ನು ಇವರು ಅನ್‌ಲೋಡ್ ಮಾಡಲು ಮುಂದಾಗಿದ್ದರು. ಈ ವೇಳೆ ಅಕಸ್ಮಿಕವಾಗಿ ನಾಲ್ಕು ಟನ್ ಭಾರದ ಗಾಜಿನ ಬ್ಲಾಕ್ ಇವರ ಮೈಮೇಲೆ ಬಿತ್ತೆನ್ನಲಾಗಿದೆ.

ಇದರಿಂದ ಇವರು ಗಾಜಿನ ಬ್ಲಾಕ್ ಮತ್ತು ಲಾರಿ ಮಧ್ಯೆ ಸಿಲುಕಿ, ಉಸಿರುಗಟ್ಟಿ ಮೃತಪಟ್ಟರೆಂದು ತಿಳಿದುಬಂದಿದೆ. ಬಳಿಕ ಕ್ರೇನ್ ಬಳಸಿ ಗಾಜಿನ ಬ್ಲಾಕ್‌ನ್ನು ತೆರವುಗೊಳಿಸಲಾಯಿತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಹಿಂದಿನ ಶಿರೂರು ಶ್ರೀಗಳಾದ ದಿ.ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಆಪ್ತರಾಗಿದ್ದು, ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಮಾಜ ಸೇವೆಯನ್ನು ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಓರ್ವ ಪುತ್ರ, ಬಂಧು ಮಿತ್ರಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor