ಕುಂದಾಪುರ, ಅ.26: ಕಳೆದ ಕೆಲವು ವರ್ಷಗಳಿಂದ ಹಾಲಿನ ಸಂಗ್ರಹಣೆ ಕಡಿಮೆಯಾಗುತ್ತಿದ್ದು, ಹೊರ ಜಿಲ್ಲೆಗಳಿಂದ ಹಾಲನ್ನು ತರಿಸಿಕೊಳ್ಳಲಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳಿನಲ್ಲಿ ಒಕ್ಕೂಟಕ್ಕೆ ಸುಮಾರು 4.40ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಬರುತ್ತಿದೆ. ಕಚ್ಚಾವಸ್ತುಗಳ ಕೊರತೆ, ಪಶು ಆಹಾರಗಳ ಬೆಲೆ ದುಬಾರಿಯಾಗಿರುವುದರಿಂದ ಹಾಲಿನ ಬೆಲೆ ಕೂಡ ಏರಿಕೆ ಆಗಲಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದ್ದಾರೆ.
ಹಡವು ಹಾಲು ಉತ್ಪಾದಕರ ಸಹಕಾರ ಸಂಘ ಹಡವು ಪಡುಕೋಣೆ ಇದರ ವತಿಯಿಂದ ಹಡವು ಶ್ರೀ ಪ್ರಸನ್ನ ಗಣಪತಿ, ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ರವಿವಾರ ಜರಗಿದ ಜಾನುವಾರು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರರು ಮತ್ತು ಸಂಘದ ಸದಸ್ಯರಿಗಾಗಿ ಅನೇಕ ಯೋಜನೆ ರೂಪಿಸಲಾಗಿದ್ದು, ಹೈನುಗಾರರು ಇದರ ಸದುಪಯೋಗ ಪಡೆದು ಕೊಳ್ಳಬೇಕು. ಹಾಲು ಉತ್ಪಾದಕ ಸಂಘಗಳು ಹಾಲಿನ ಸಂಗ್ರಹಣೆ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಅವರು ತಿಳಿಸಿದರು.
ಹೈನುಗಾರಿಕೆಯಲ್ಲಿ ಲಾಭ ಇದೆ. ಸಾಕಷ್ಟು ಜನರು ಹೈನುಗಾರಿಕೆಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಜಾನುವಾರುಗಳ ಮೇಲೆ ಪ್ರೀತಿ ಇದ್ದವರು ಮಾತ್ರ ಹೈನುಗಾರಿಕೆ ನಡೆಸುತ್ತಿದ್ದು, ಉತ್ತಮ ರೀತಿಯಲ್ಲಿ ದನವನ್ನು ಸಾಕಿದರೆ ನಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಹಟ್ಟಿ ಗೊಬ್ಬರ ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಹಡವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಂತೋನಿ ಟೋನ್ ಫ್ರಾನ್ಸಿಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಮಂಜಯ್ಯ ಶೆಟ್ಟಿ, ಮಮತಾ ಆರ್.ಶೆಟ್ಟಿ, ಒಕ್ಕೂಟದ ಉಪ ವ್ಯವಸ್ಥಾಪಕ ಶಂಕರ ನಾಯಕ್, ತ್ರಾಸಿ ಡೋನ್ ಬಾಸ್ಕೋ ಶಾಲೆಯ ಆಡಳಿತಾಧಿಕಾರಿ ಅರ್ನಾಲ್ಡ್ ಮಥಾಯಸ್, ನಾಡ ಗ್ರಾಪಂ ಮಾಜಿ ಉಪಾಧ್ಯಕ್ಷ ಅರವಿಂದ ಪೂಜಾರಿ, ಸಂಘದ ಮಾಜಿ ನಿರ್ದೇಶಕ ಶೀನ ದೇವಾಡಿಗ ಉಪಸ್ಥಿತರಿದ್ದರು.
ಅಂತೋನಿ ಟೋನ್ ಫ್ರಾನ್ಸಿಸ್ ಡಿಸೋಜ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಮಧ್ಯಸ್ಥ ವರದಿ ವಾಚಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ತಳಿಗಳ ಸುಮಾರು 50ಕ್ಕೂ ಮಿಕ್ಕಿ ಜಾನುವಾರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.