ದಲಿತರ ನಿರ್ಲಕ್ಷ್ಯದ ವಿರುದ್ಧ ಕಾಪು ತಾಲೂಕು ಕಚೇರಿ ಮುತ್ತಿಗೆ: ಡಿಎಚ್ಎಸ್ ಎಚ್ಚರಿಕೆ
ಶಿರ್ವ, ಅ.26: ಡಿಸಿ ಮನ್ನಾ ಜಮೀನು ಬಂಡೆ, ಹೊಳೆ, ರಸ್ತೆ, ಸಾರ್ವಜನಿಕ ಉದ್ದೇಶಗಳಲ್ಲಿ ಕಳೆದುಹೋಗಿದ್ದು, ದಲಿತರಿಗೆ ಈ ಜಮೀನಿಗೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಮೀಸಲಿರಿಸುವ ಬಗ್ಗೆ ಹಾಗೂ ಭೂ ಅನುದಾನ ನಿಯಮಾವಳಿ 1969ರಂತೆ ಪ್ರತಿ ಗ್ರಾಮದಲ್ಲಿ ಶೇ.50 ಸರಿಕಾರಿ ಜಮೀನನ್ನು ದಲಿತರಿಗೆ ಮೀಸಲಿರಿಸುವಂತೆ ಕಾಪು ತಾಲ್ಲೂಕು ತಹಶೀಲ್ದಾರರಿಗೆ ಹಲವು ಹಕ್ಕೊತ್ತಾಯಗಳನ್ನು ಸಲ್ಲಿಸಿದ್ದರೂ ಅವರು ಈ ವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಅವರು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗು ವುದು ಎಂದು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಎಚ್ಚರಿಕೆ ನೀಡಿದ್ದಾರೆ.
ಮೂಡುಬೆಳ್ಳೆಯಲ್ಲಿ ಡಿಎಚ್ಎಸ್ ಕಾರ್ಯಾಲಯ ’ಪ್ರಬುದ್ಧ’ದಲ್ಲಿ ಅ. 26ರಂದು ಜರಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಲಿತರ ವಿವಿಧ ಬೇಡಿಕೆಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಒಳಪಡಿಸುವಂತೆ ಹಕ್ಕೊತ್ತಾಯ ಮಾಡುವ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ಸಂಘಟನೆಯಿಂದ ಕೈಗೊಳ್ಳ ಲಾಗಿದೆ. ರಾಜ್ಯ ಸರಕಾರ 2022-23ನೇ ಸಾಲಿನಿಂದ ವಸತಿ ಮನೆಗಳನ್ನು ಮಂಜೂರು ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಅಂಬೇಡ್ಕರ್ ವಾದ ಕಾಪು ತಾಲ್ಲೂಕು ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ ಮಾತನಾಡಿ, ಕಟ್ಟಿಂಗೇರಿ ಗ್ರಾಮದಲ್ಲಿ ಹಲವು ದಶಕಗಳಿಂದ ದಲಿತ ಕುಟುಂಬಗಳು ವಾಸವಿದ್ದು ಅವರಿಗೆ ಈ ಸರಕಾರಿ ಜಮೀನು ಬಂಡೆ ಎಂಬ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಆದರೆ ಈ ಜಮೀನನ್ನು ಸಾರಾಯಿ ಅಂಗಡಿಗೆ ಹಿಂದೆ ಮೀಸಲಿರಿಸ ಲಾಗಿತ್ತು ಎಂದು ಜಿಲ್ಲಾಧಿಕಾರಿ ಹಿಂಬರಹ ನೀಡಿದ್ದಾರೆ. ಸಾರಾಯಿ ಅಂಗಡಿಗೆ ನೀಡಬಹುದಾದರೆ ದಲಿತರ ಮನೆ ನಿವೇಶನಕ್ಕೆ ಸರಕಾರಿ ಜಾಗ ನೀಡಲು ಸಾಧ್ಯವಿಲ್ಲವೇ? ಕಾಪು ತಹಶೀಲ್ದಾರ್ ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗೆ ಯಥಾಸ್ಥಿತಿ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಡಿಎಚ್ಎಸ್ ಕೋಶಾಧಿಕಾರಿ ನಾಗರತ್ನಾ ಆರ್. ನಾಡಾ ಮಾತನಾಡಿ, ಬೈಂದೂರು ನಾಡಾ ಗ್ರಾಮದ ದಲಿತರಿಗೆ ಹಲವು ದಶಕಗಳು ಕಳೆದರೂ ಹಕ್ಕುಪತ್ರ ನೀಡಲಾಗಿಲ್ಲ. ಅಂಪಾರು ಗ್ರಾಮದಲ್ಲೂ ಈ ಸಮಸ್ಯೆ ಇದೆ ಎಂದು ಆರೋಪಿಸಿದರು.
ಡಿಎಚ್ಎಸ್ ಕಾರ್ಯದರ್ಶಿ ರವಿ ವಿಎಂ, ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ, ಗೌರವಾಧ್ಯಕ್ಷ ಸುಧಾಕರ ಪಾಣಾರ ಉಪಸ್ಥಿತರಿದ್ದರು.