ಮಲ್ಪೆ| ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣ ನಾರ್ವೆಗೆ 6,300 ಡಿಡಬ್ಲ್ಯುಟಿ ಸಾಮರ್ಥ್ಯದ ಕಾರ್ಗೋಶಿಪ್ ಹಸ್ತಾಂತರ
ಉಡುಪಿ, ಅ.26: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ ಸಹ ಸಂಸ್ಥೆ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿ. (ಯುಸಿಎಸ್‌ಎಲ್)ನಲ್ಲಿ ನಿರ್ಮಾಣಗೊಂಡ 6,300 ಡಿಡಬ್ಲ್ಯುಟಿ (ಡೆಡ್‌ವೆಯ್ಟ್ ಟೊನೇಜ್) ಸಾಮರ್ಥ್ಯದ ಎಂಟು ಡ್ರೈ ಕಾರ್ಗೋ ಶಿಪ್‌ಗಳ ಸರಣಿಯ ಮೊದಲ ಹಡಗನ್ನು ಇಂದು ಬಿಡುಗಡೆಗೊಳಿಸಿ ನಾರ್ವೆಗೆ ಹಸ್ತಾಂತರಿಸಲಾಯಿತು.
ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ನಾರ್ವೆಯ ವಿಲ್ಸನ್ ಎಎಸ್‌ಎಗಾಗಿ ಮಲ್ಪೆಯ ಯುಸಿಎಸ್‌ಎಲ್ ನಿರ್ಮಿಸಿ ಕೊಡಲಿರುವ ಈ ಸರಣಿಯ ಎಂಟು ಡ್ರೈ ಕಾರ್ಗೋ ವೆಸೆಲ್ಸ್‌ಗಳಲ್ಲಿ ಮೊದಲನೆ ಯದಾದ ಯುವೈ 175ನ್ನು ಭಾರತದಲ್ಲಿ ನಾರ್ವೆಯ ರಾಯಭಾರಿಯಾಗಿರುವ ಮೇ ಎಲಿನ್ ಸ್ಟೆನ್ನರ್ ಬಿಡುಗಡೆ ಗೊಳಿಸಿ ವಿಲ್ಸನ್ ಎಎಸ್‌ಎಯ ಅಧ್ಯಕ್ಷ ಇವಿಂಡ್ ಎಡ್ಸ್‌ವಿಕ್ ಅವರಿಗೆ ಹಸ್ತಾಂತರಿ ಸಿದರು. ಇವಿಂಡ್ ಅವರ ಪುತ್ರಿ ಅನ್ನಾ ಎಡ್ಸ್‌ವಿಕ್ ಅವರು ಸ್ವಿಚ್ ಒತ್ತುವ ಮೂಲಕ ಹಡಗನ್ನು ನೀರಿಗೆ ಬಿಡುಗಡೆಗೊಳಿಸಿದರು.
ಒಣ ಸರಕುಗಳನ್ನು ಸಾಗಿಸುವ ಈ ಕಾರ್ಗೋ ಶಿಪ್ ನಾರ್ವೆಯ ವಿಲ್ಸನ್ ಎಎಸ್‌ಎಗಾಗಿ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣ ಗೊಂಡಿದೆ. ಕೇಂದ್ರ ಸರಕಾರದ ಅಮೃತಕಾಲ ಮಿಷನ್‌ನಡಿ ಈ ಹಡಗನ್ನು ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ ಎಂದು ಕೊಚ್ಚಿನ್ ಶಿಪ್ ಯಾರ್ಡ್‌ನ ನಿರ್ದೇಶಕ (ಆಪರೇಷನ್ಸ್) ಹರಿಕೃಷ್ಣನ್ ತಿಳಿಸಿದರು.
ಇದೇ ವೇಳೆ ಈ ಸರಣಿಯ ಮೂರನೇ ಶಿಪ್ ಯುವೈ 177ರ ನಿರ್ಮಾಣಕ್ಕೆ ‘ಹಡಗಿನ ಅಡಿಮರ’ (ಕೀಲ್) ಹಾಕುವ ಕಾರ್ಯಕ್ರಮವನ್ನು ಭಾರತದಲ್ಲಿ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೆನ್ನರ್ ನಡೆಸಿಕೊಟ್ಟರು. ಸರಣಿಯ ಎರಡನೇ ಹಡಗಿನ ನಿರ್ಮಾಣ ಬರದಿಂದ ಸಾಗಿತ್ತು, ಮೂರು ಮತ್ತು ನಾಲ್ಕನೇ ಹಡಗುಗಳ ನಿರ್ಮಾಣಕ್ಕೆ ಇದೀಗ ಚಾಲನೆಯನ್ನು ನೀಡಲಾಗಿದೆ.
ವಿಲ್ಸನ್ ಎಎಸ್‌ಎಯ 6,300 ಸರಣಿಯ ಮೊದಲ ಯುವೈ 175 ಶಿಪ್‌ನ ವಿನ್ಯಾಸವನ್ನು ನಾರ್ವೆಯ ಪ್ರಸಿದ್ಧ ವಿನ್ಯಾಸಕಾರ ಸಂಸ್ಥೆ ಕಾನ್‌ಶಿಪ್ ಇಂಟರ್‌ನೇಷನಲ್ ಸಿದ್ಧಪಡಿಸಿದ್ದು, ಇದು 99ಮೀ. ಉದ್ದ ಹಾಗ 15.85 ಎತ್ತರವಿದೆ. ಮಲ್ಪೆಯಲ್ಲಿ 2021ರಲ್ಲಿ ಕಾರ್ಯಾರಂಭಿಸಿದ ಯುಸಿಎಸ್‌ಎಲ್ ಈವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಕಾರ್ಗೋ ಶಿಪ್ ಇದಾಗಿದೆ. ಈ ಮೂಲಕ ತಮ್ಮ ಸಂಸ್ಥೆ ಬೃಹತ್ ಹಡಗುಗಳ ನಿರ್ಮಾಣಕ್ಕೆ ಶುಭಾರಂಭವನ್ನು ಮಾಡಿದೆ ಎಂದು ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಸಿಇಒ ಹರಿಕುಮಾರ್ ಎ. ತಿಳಿಸಿದರು.
ಈ ಸಂದರ್ಭದಲ್ಲಿ ಹೊಸದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯದ ಕಾರ್ಯದರ್ಶಿ ವಿಜಯಕುಮಾರ್ ಅವರು, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಯುವೈ-175 ಶಿಪ್‌ನ್ನು ಹಸ್ತಾಂತರಿಸುವ ಮೂಲಕ ನಾರ್ವೆ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲು ಸಹಕಾರಿಯಾಗಿದೆ. ಈ ಮೂಲಕ ಯುಸಿಎಸ್‌ಎಲ್ ಬೃಹತ್ ಗಾತ್ರದ ಹಡಗುಗಳ ನಿರ್ಮಾ ಣಕ್ಕೆ ಶುಭಾರಂಭ ಮಾಡಿದ್ದು, ದೊಡ್ಡ ಮಟ್ಟದ ವಿಸ್ತರಣೆಗೆ ಮುಂದಾಗಬಹುದಾಗಿದೆ. ಹಡಗುಗಳ ನಿರ್ಮಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಚ್ಚಿನ್ ಶಿಪ್‌ಯಾರ್ಡ್‌ನ ಡಾ. ಹರಿಕೃಷ್ಣನ್ ಎಸ್. ಅವರು, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ನಿಗದಿತ ಸಮಯಕ್ಕಿಂತ ಮೊದಲೇ ತನ್ನೆಲ್ಲಾ ಹಡಗುಗಳನ್ನು ನಿರ್ಮಿಸಿಕೊಡುವ ಮೂಲಕ ಗ್ರಾಹಕ ಸಂಸ್ಥೆಗಳ ವಿಶ್ವಾಸವನ್ನು ಗಳಿಸಿದೆ. ಈ ಮೂಲಕ ನ್ನಷ್ಟು ಜಾಗತಿಕ ಗ್ರಾಹಕರನ್ನು ಸೆಳೆಯಲು ಇದು ಸಹಕಾರಿ ಯಾಗಿದೆ. ಜಾಗತಿಕ ಹಡಗು ನಿರ್ಮಾಣದಲ್ಲಿ ಇದು ತನ್ನ ಸ್ಥಾನವನ್ನು ಹೊಂದಬಹುದಾಗಿದೆ ಎಂದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದಲ್ಲಿ ನಾರ್ವೆಯ ರಾಯಭಾರಿಯಾಗಿರುವ ಮೇ ಎಲಿನ್‌ಸ್ಟೆನ್ನರ್, ಮೂರು ತಿಂಗಳ ಹಿಂದೆ ಭಾರತ ಹಾಗೂ ನಾರ್ವೆ ನಡುವೆ ನಡೆದ ವ್ಯಾಪಾರಿ ಒಪ್ಪಂದ ಇಂದು ಯುವೈ 175ರ ಹಸ್ತಾಂತರೊಂದಿಗೆ ಕಾರ್ಯರೂಪಕ್ಕೆ ಬಂದಿದೆ. ಭಾರತಕ್ಕೆ ಹೋಲಿಸಿದರೆ ಪುಟ್ಟದೇಶವಾದ ನಾರ್ವೆಯ 116 ಕಂಪೆನಿಗಳು ಭಾರತದಲ್ಲಿದ್ದು, ಹೆಚ್ಚು ಮೆರಿಟೈಮ್ (ಕಡಲು)ನಲ್ಲಿ ಹೆಚ್ಚಿನ ಸಂಬಂಧವನ್ನು ಹೊಂದಿದೆ ಎಂದರು.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಒ ಹರಿಕುಮಾರ್ ಮಾತನಾಡಿ, ಯುಸಿಎಸ್‌ಎಲ್ ಹಾಗೂ ವಿಲ್ಸನ್ ಎಎಸ್‌ಎ ನಡುವೆ 6300ಡಿಡಬ್ಲ್ಯುಟಿಯ ಎಂಟು ಡ್ರೈ ಕಾರ್ಗೋ ವೆಸೆಲ್ಸ್ ನಿರ್ಮಾಣಕ್ಕೆ ಒಪ್ಪಂದವಾಗಿದ್ದು, 2028ರ ಜೂನ್ ಒಳಗೆ ಎಲ್ಲವನ್ನೂ ನಾರ್ವೆಗೆ ಹಸ್ತಾಂತರಿಸಲು ಸಂಸ್ಥೆ ಬದ್ಧವಿದೆ. ಪರಿಸರ ಸ್ನೇಹಿಯಾಗಿ ಹಸಿರು ಶಿಪ್‌ನ್ನು ನಾವು ನಿರ್ಮಿಸಲಿದ್ದೇವೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರದೀಪ್ ಸುಧಾಕರ್, ನಾರ್ವೆ ರಾಯಭಾರ ಕಚೇರಿಯ ಸೆಕೆಂಡ್ ಸೆಕ್ರೆಟರ್ ಹೈನ್ ಟೊಫ್ಟ್ ನಾರ್ಡಲ್, ಎನ್‌ಎಂಪಿಟಿಯ ಕ್ಯಾಪ್ಟನ್ ಮನೋಜ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.