ಮೀಲಾದುನ್ನಬಿ: ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಕೋಟತಟ್ಟು ಪಡುಕರೆ
ಕುಂದಾಪುರ, ಸೆ.28: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಬ್ರಹ್ಮಾವರ ತಾಲೂಕಿನ ಕೋಟತಟ್ಟುನಿಂದ ಕೋಡಿ ಕನ್ಯಾಣದವರೆಗೆ ಮದರಸ ಮಕ್ಕಳು, ಕಿರಿಯರು, ಹಿರಿಯರು ಸೇರಿ ಕಾಲ್ನಡಿಗೆಯಲ್ಲಿ ಮೀಲಾದುನ್ನಬಿ ಸಂದೇಶ ರ‍್ಯಾಲಿಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಹಿಂದೂಗಳು ಕೂಡ ಈ ರ‍್ಯಾಲಿಗೆ ಸಹಕಾರ ನೀಡುವ ಮೂಲಕ ಹಿಂದೂ - ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದರು. ರ‍್ಯಾಲಿ ಸಾಗುವ ದಾರಿಯಲ್ಲಿ ಹಿಂದೂಗಳು ಐಸ್‌ಕ್ರೀಮ್, ತಂಪು ಪಾನೀಯಗಳನ್ನು ವಿತರಿಸಿ ರ‍್ಯಾಲಿಯಲ್ಲಿ ಸಾಗಿ ಬಂದವರ ದಣಿವಾರಿಸಿದರು.
ಕೋಟತಟ್ಟು ಪಡುಕರೆಯ ರತ್ನಾಕರ ಶ್ರೀಯಾನ್ ಅವರ ಮುಂದಾಳತ್ವ ದಲ್ಲಿ, ಕೋಟ ಸಿ.ಎ.ಬ್ಯಾಂಕ್ ಅಧ್ಯಕ್ಷ ತಿಮ್ಮ ಬಿ.ಪೂಜಾರಿ ಅವರ ಉಪಸ್ಥಿತಿಯಲ್ಲಿ ರ‍್ಯಾಲಿಯಲ್ಲಿ ಬಂದ ಮುಸ್ಲಿಮರಿಗೆ ಐಸ್ ಕ್ರೀಮ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಿಮ್ಮ ಬಿ. ಪೂಜಾರಿ, ರೇಖಾ ಪಿ. ಸುವರ್ಣ, ರತ್ನಾಕರ ಶ್ರೀಯಾನ್, ಮಹಾಬಲ ದೇವಾಡಿಗ, ಪ್ರತಾಪ್ ಪೂಜಾರಿ ಪಾರಂಪಳ್ಳಿ, ಉಮೇಶ್ ಪಡುಕರೆ, ನಾಗರಾಜ್, ಗಿರೀಶ್ ಪಡುಕರೆ ಮೊದಲಾದವರು ಭಾಗಿಯಾಗಿದ್ದರು. ಹಿಂದೂಗಳ ಸಹಕಾರಕ್ಕೆ ಮುಸ್ಲಿಂ ಮುಖಂಡರು ಧನ್ಯವಾದಗಳನ್ನು ಸಲ್ಲಿಸಿದರು.