×
Ad

ಮುಸ್ಲಿಮರ ರಾಜ್ಯ ಮಟ್ಟದ ಒಕ್ಕೂಟದ ಮೂಲಕ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಪ್ರಯತ್ನ

ಉಡುಪಿಯಲ್ಲಿ ನಡೆದ ರಾಜ್ಯದ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧಾರ

Update: 2025-11-15 19:49 IST

ಉಡುಪಿ: ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದ ಮುಸ್ಲಿಂ ಸಂಘಟನೆಗಳ ಒಂದು ಒಕ್ಕೂಟ ರೂಪಿಸಿ ಸಂಘಟಿತ ಪ್ರಯತ್ನ ನಡೆಸಬೇಕೆಂಬ ನಿರ್ಧಾರವನ್ನು ಉಡುಪಿಯಲ್ಲಿ ಶನಿವಾರ ನಡೆದ ರಾಜ್ಯದ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಉಡುಪಿ ಮಿಷನ್ ಕಂಪೌಂಡ್‌ನಲ್ಲಿರುವ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಲ್ ಕೆ ಅತೀಕ್, ರಾಜ್ಯದ ಕಾಂಗ್ರೆಸ್ ಸರಕಾರದ ಮುಂದೆ ಇರುವ ಮುಸ್ಲಿಂ ಸಮುದಾಯದ ಬೇಡಿಕೆಗಳ ಜಾರಿಗೆ ಇರುವ ರಾಜಕೀಯ, ಕಾನೂನು ಹಾಗೂ ಆಡಳಿತಾತ್ಮಕ ಸವಾಲುಗಳ ಬಗ್ಗೆ ಮಾತನಾಡಿದರು. ಜೊತೆಗೆ ಮುಸ್ಲಿಂ ಸಮುದಾಯ ತನ್ನ ಅಭಿವೃದ್ಧಿಗೆ ಸ್ವತಃ ಏನೇನು ಮಾಡಬೇಕು, ಇತರ ಸಮುದಾಯಗಳ ಜೊತೆ ಸೇರಿಕೊಂಡು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಸಲಹೆಯನ್ನು ಅವರು ನೀಡಿದರು.

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನೀಡಿದ್ದ ಭರವಸೆಗಳು, ಈ ಸರಕಾರದಿಂದ ಸಮುದಾಯ ಇಟ್ಟಿದ್ದ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಈಡೇರಿವೆ, ಮುಸ್ಲಿಮರ ಬಗ್ಗೆ ಸರಕಾರದ ಧೋರಣೆ ಹೇಗಿದೆ, ಮುಂದಿನ ಎರಡುವರೆ ವರ್ಷಗಳಲ್ಲಿ ಈ ಸರಕಾರದ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಚರ್ಚೆಗೆ ಪೀಠಿಕೆಯಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿದರು.

ಮುಸ್ಲಿಂ ಸಮುದಾಯ ಸರಕಾರದಿಂದ ಬಯಸುವ ಕ್ರಮಗಳಿಗೆ ಇರುವ ಕಾನೂನಾತ್ಮಕ ಸವಾಲುಗಳ ಬಗ್ಗೆ ಬೆಂಗಳೂರಿನ ವಕೀಲ ಮುಝಫರ್ ಅಹ್ಮದ್ ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಬಿಎಸ್‌ಎಫ್ ರಫೀಕ್ ಉಪಸ್ಥಿತರಿದ್ದರು.

ರಾಜ್ಯದ ಸುಮಾರು 15 ಜಿಲ್ಲೆಗಳಿಂದ ಬಂದಿದ್ದ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ ಸ್ವಾಗತಿಸಿದರು. ಮೌಲಾನಾ ಝರ್ಮೀ ಅಹ್ಮದ್ ರಶಾದಿ ಚರ್ಚೆಯನ್ನು ನಿರ್ವಹಿಸಿದರು. ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಝಫರುಲ್ಲಾ ಹೂಡೆ ವಂದಿಸಿದರು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News