×
Ad

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮಿಲಾದುನ್ನಬಿ ಆಚರಣೆ: ದಫ್, ಸ್ಕೌಟ್ ತಂಡಗಳ ಆಕರ್ಷಣೆ

Update: 2023-09-28 17:40 IST

ಉಡುಪಿ, ಸೆ.28: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರ ಜನ್ಮದಿನ ಮಿಲಾದುನ್ನಬಿ ಆಚರಣೆಯು ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದಿಂದ ನಡೆಯಿತು.

ಕಾಪು, ಉಚ್ಚಿಲ, ಎರ್ಮಾಳ್, ಮಲ್ಪೆ, ಪಡುಬಿದ್ರಿ, ದೊಡ್ಡಣಗುಡ್ಡೆ, ಕುಂದಾಪುರ, ಕೋಡಿ, ಬೈಂದೂರು, ಕಾರ್ಕಳ ಸೇರಿ ದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಮಿಲಾದ್ ರ್ಯಾಲಿಯಲ್ಲಿ ಮದ್ರಸಗಳ ವಿದ್ಯಾರ್ಥಿಗಳು, ದಫ್ ತಂಡಗಳು ಗಮನ ಸೆಳೆದವು.

ಮಸೀದಿಯಿಂದ ಹೊರಟ ಜಾಥವು ಆಯಾ ಮಸೀದಿ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಪಾಸ್ಸು ಮಸೀದಿಗೆ ಆಗಮಿಸಿ ಸಮಾಪ್ತಿ ಗೊಂಡಿತು. ಬಳಿಕ ಮಸೀದಿಗಳಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು.

ಉಡುಪಿ ನಗರ: ದೊಡ್ಡಣಗುಡ್ಡೆಯ ಮಸೀದಿಯಿಂದ ಹೊರಟ ಜಾಥವು ಬಾಳಿಗಾ ಆಸ್ಪತ್ರೆ ಮಾರ್ಗದಲ್ಲಿ ಸಾಗಿ ವಾಪಾಸು ಮಸೀದಿಗೆ ತೆರಳಿ ಸಮಾಪ್ತಿಗೊಂಡಿತು. ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಗೂ ಖತೀಬ್ ಕಾಸಿಂ ಸಅದಿ ಉಪಸ್ಥಿತರಿದ್ದರು.

ನೇಜಾರು ಜುಮ್ಮಾ ಮಸೀದಿಯಿಂದ ಹೊರಟ ಮಿಲಾದು ಜಾಥವು ಸಂತೆಕಟ್ಟೆ ವರೆಗೆ ತೆರಳಿ ವಾಪಸ್ಸು ಮಸೀದಿಗೆ ಮರಳಿ ಸಮಾಪ್ತಿಗೊಂಡಿತು. ಜಾಥದಲ್ಲಿ ದಫ್ ತಂಡ ಹಾಗೂ ಮದ್ರಸಾ ವಿದ್ಯಾರ್ಥಿಗಳು ಗಮನ ಸೆಳೆದರು.

ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೇವಸ್ಥಾನ, ನೇಜಾರು ಮತ್ತು ಸಂತೆಕಟ್ಟೆ ರಿಕ್ಷಾ ಚಾಲಕರ ವತಿಯಿಂದ ರ‌್ಯಾಲಿಯಲ್ಲಿ‌ ಸಾಗಿ ಬಂದವರಿಗೆ ತಂಪು ಪಾನೀಯ ವಿತರಿಸಲಾಯಿತು. ಗುರು ಗಣೇಶ್ ಕನ್ಸ್ಟ್ರಕ್ಷನ್ ಇವರಿಂದ ಸಿಹಿ ತಿಂಡಿ ವಿತರಿಸಲಾಯಿತು. ಮಸೀದಿಯಲ್ಲಿ ಬಳಿಕ ನಡೆದ ಅನ್ನದಾನದಲ್ಲಿ ಸರ್ವಧರ್ಮಿಯರು ಪಾಲ್ಗೊಂಡಿದ್ದರು.

ಕಾಪು ತಾಲೂಕು: ಕಾಪು, ಮಜೂರು, ಮಲ್ಲಾರು, ಚಂದ್ರನಗರ, ಪಕೀರ್ಣಕಟ್ಟೆ ಸಹಿತ ವಿವಿಧ ಮಸೀದಿಗಳಿಂದ ಹೊರಟ ಮಿಲಾದ್ ಜಾಥಾವು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ಕೊಪ್ಪಲಂಗಡಿ ಮಸೀದಿ ಸೇರಿತು. ಅಲ್ಲಿಂದ ಹೊರಟ ಜಾಥವು ಕಾಪು ಪೇಟೆ ಮೂಲಕ ಸಾಗಿ ಕಾಪು ಪೊಲಿಪು ಜುಮ್ಮಾ ಮಸೀದಿಯಲ್ಲಿ ಜಾಥ ಸಮಾಪ್ತಿಗೊಂಡಿತು.

ವಿವಿಧ ದಫ್ ತಂಡಗಳು, ಮದ್ರಸ ವಿದ್ಯಾರ್ಥಿಗಳು, ನೂರಾರು ವಾಹನಗಳು ಜಾಥಾಕ್ಕೆ ಮೆರುಗು ನೀಡಿತು. ಈ ಸಂದರ್ಭ ದಲ್ಲಿ ಕಾಪು ಖಾಝಿ ಪಿ.ಬಿ.ಅಹಮ್ಮದ್ ಮುಸ್ಲಿಯಾರ್, ಪೊಲಿಪು ಮಸೀದಿ ಖತೀಬ್ ಇರ್ಷಾದ್ ಸಅದಿ ಹಾಜರಿದ್ದರು.

ಪಡುಬಿದ್ರಿ: ಕಂಚಿನಡ್ಕ ಜುಮ್ಮಾ ಮಸೀದಿಯಿಂದ ಹೊರಟ ಮೀಲಾದ್ ಜಾಥಾವು ರಾಜ್ಯ ಹೆದ್ದಾರಿಯಾಗಿ ಪಡುಬಿದ್ರಿ ಪೇಟೆಯಾಗಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಜುಮಾ ಮಸೀದಿ ತಲುಪಿತು. ಜಾಥಾದಲ್ಲಿ ಸೌಟ್ ಮಕ್ಕಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.

ಹೆಜಮಾಡಿ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಕೋಡಿ ರಸ್ತೆಯ ಮೂಲಕ ಹಾದು ಹೋಗಿ ಎನ್.ಎಸ್. ರಸ್ತೆ ಯಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕನ್ನಂಗಾರ್ ಜುಮ್ಮಾ ಮಸೀದಿ ತಲುಪಿತು.

ಪಲಿಮಾರು ಜುಮ್ಮಾಮಸೀದಿ-ಫಲಿಮಾರು ಪೇಟೆಯಾಗಿ ಜುಮ್ಮಾಮಸೀದಿ ತಲುಪಿತು. ಎರ್ಮಾಳು, ಮೂಳೂರಿನಲ್ಲೂ ಸಂಭ್ರಮ ಸಡಗರದಿಂದ ಮೀಲಾದ್ ಜಾಥಾವು ನಡೆಯಿತು. ಮೀಲಾದ್ ಮುನ್ನಾ ಪ್ರವಾದಿ ಸಂದೇಶಗಳನ್ನು ಸಾರಲಾ ಯಿತು. ಮಕ್ಕಳ ಪ್ರತಿಭಾ ಸ್ಪರ್ಧೆ, ಸಾರ್ವಜನಿಕ ಅನ್ನದಾನವು ನಡೆಯಿತು.

ಗಂಗೊಳ್ಳಿ: ಗಂಗೊಳ್ಳಿ ಜುಮ್ಮಾ ಮಸೀದಿಯಿಂದ ಹೊರಟ ಜಾಥವು ಬಂದರು ಬಸ್ ನಿಲ್ದಾಣದವರೆಗೆ ಸಾಗಿ ಬಳಿಕ ವಾಪಸ್ಸು ಮಸೀದಿಗೆ ಆಗಮಿಸಿ ಸಮಾಪ್ತಿಗೊಂಡಿತು.

ಸುಲ್ತಾನ್ ಮೊಹಲ್ಲಾ ಮದರಸದ ವಿದ್ಯಾರ್ಥಿಗಳಿಂದ ಪ್ರದರ್ಶನ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಗಮನಸೆಳೆದರು. ಮಿಲಾದುನ್ನಬಿ ಆಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು.
















 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News