ಸ್ಥಗಿತಗೊಂಡ ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಕ್ಕೆ ಕೇಂದ್ರ ಸಚಿವರಿಗೆ ಪತ್ರ ಬರೆದ ಸಂಸದ ಕೋಟ
ಉಡುಪಿ: ಇದೀಗ ಸ್ಥಗಿತಗೊಂಡಿರುವ ಮಂಗಳೂರು ಹಾಗೂ ಮಸ್ಕತ್ ನಡುವಿನ ನೇರ ವಿಮಾನಯಾನವನ್ನು ಪುನರಾರಂಭಿಸುವ ಆಗ್ರಹಿಸಿ ಕೇಂದ್ರ ವಿಮಾನಯಾನ ಸಚಿವ ಕಿಂಜಿರಪು ರಾಮಮೋಹನ್ ನಾಯ್ದು ಅವರಿಗೆ ಪತ್ರ ಬರೆದಿರುವುದಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಮಸ್ಕತ್ ನಿಂದ ಮಂಗಳೂರು ನೇರ ವಿಮಾನ ಸೇವೆಯನ್ನು ಮರು ಪ್ರಾರಂಭಿಸಲು ನೀಡಿದ ಮನವಿ ಪತ್ರದ ಹಿನ್ನೆಲೆಯಲ್ಲಿ ತಾವು ಕೇಂದ್ರ ಸಚಿವರಿಗೆ ಪತ್ರ ಬರೆದು ಸ್ಥಗಿತಗೊಳಿಸಿರುವ ವಿಮಾನಯಾನವನ್ನು ಮತ್ತೆ ಪ್ರಾರಂಭಿಸಿರುವಂತೆ ಮನವಿ ಮಾಡಿರುವುದಾಗಿ ಸಂಸದ ಕೋಟ ಹೇಳಿದ್ದಾರೆ.
ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆ ಕಳೆದ 3 ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಅನಿವಾಸಿ ಭಾರತೀಯರು ತೊಂದರೆ ಅನುಭಸುತ್ತಿದ್ದಾರೆ. ಈ ಮಾರ್ಗದಲ್ಲಿ ಮೊದಲು ವಾರಕ್ಕೆ 4 ವಿಮಾನಗಳು ನಿಯಮಿತವಾಗಿ ಸಂಚಾರ ನಡೆಸುತ್ತಿದ್ದು, ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಸ್ಥಗಿತಗೊಂಡಿದ್ದರಿಂದ ಕರಾವಳಿ ಭಾಗದ ಜನರಿಗೆ ತುಂಬಾ ತೊಂದರೆಯುಂಟಾಗಿರುವುದರಿಂದ ಕೂಡಲೇ ಮಸ್ಕತ್-ಮಂಗಳೂರು ನೇರ ವಿಮಾನಯಾನ ಸೇವೆ ಪುನರಾರಂಭಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.