ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗಾನಯಾನ ಕಾರ್ಯಕ್ರಮ
ಹೆಬ್ರಿ, ನ.25: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ಸೀತಾ ನದಿ ಸೌಖ್ಯಯೋಗ ಟ್ರಸ್ಟ್ ಹೆಬ್ರಿ ಹಾಗೂ ಶಾಲಾ ಎಸ್‌ಡಿಎಂಸಿ ಸಮಿತಿ ಹಾಗೂ ಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಸಹ ಯೋಗದೊಂದಿಗೆ ಗಾನಯಾನ ಕಾರ್ಯಕ್ರಮವನ್ನು ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಸತೀಶ್ ಪೈ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲೂ ಬೇರೆ ಬೇರೆ ಪ್ರತಿಭೆ ಗಳು ಇರುತ್ತವೆ. ಅದನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಿದಾಗ ಪ್ರತಿಭೆಗಳ ಅನಾವರಣಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ವಹಿಸಿದ್ದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಗಾನ ಯಾನ ಗೀತಗಾಯನ ಕುರಿತು ಸ್ವರಚಿತ ಗೀತೆಯನ್ನು ಹಾಡುವುದರ ಮೂಲಕ ಗಾನಯಾನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿ ಸುಕೇತ ಸ್ವರಚಿರ ಗೀತೆಯನ್ನು ಹಾಡಿದರು.
ಶಾಲಾ ವಿದ್ಯಾರ್ಥಿಗಳಾದ ಪ್ರಣತಿ ತಂಡ ಕನ್ನಡ ಗೀತೆಯನ್ನು ಹಾಡಿದರು. ಚಾಣಕ್ಯ ತಂಡದ ಗಾಯಕರಾದ ನಿತ್ಯಾನಂದ ಭಟ್, ಸುಬ್ರಹ್ಮಣ್ಯ ಕಂಗಿನಾಯ, ಉಮಾಶ್ರೀ, ಮೀನಾಕ್ಷಿ, ನಾಗರಾಜ್ ಬಚ್ಚಪ್ಪು ಕನ್ನಡ ಗೀತಾ ಗಾಯನ ನಡೆಸಿಕೊಟ್ಟರು. ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಸ್ವಾಗತಿಸಿ, ಶಾಲಾ ಹಿಂದಿ ಭಾಷ ಶಿಕ್ಷಕ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್‌ನ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ವಂದಿಸಿದರು.