×
Ad

ಯುವ ಜನರಲ್ಲಿ ಜವಾಬ್ದಾರಿ ಕೊರತೆಯಿಂದ ವಿವಾಹ ವಿಚ್ಛೇದನೆ ಹೆಚ್ಚಳ: ನ್ಯಾಯವಾದಿ ಮೀರಾ

Update: 2023-12-03 17:40 IST

ಉಡುಪಿ: ದೇಶದ ಶ್ರೀಮಂತ ಸಂಸ್ಕೃತಿಯ ಮೂಲ ಇತಿಹಾಸದ ಬಗ್ಗೆ ವ್ಯವಸ್ಥಿತ ಅಧ್ಯಯನ ಇನ್ನೂ ನಡೆದಿಲ್ಲ. ಈಗಿನ ಯುವ ಜನರಲ್ಲಿ ಜವಾಬ್ದಾರಿ ಕೊರತೆ ಕಾಡುತ್ತಿದೆ. ಇದರ ಪರಿಣಾಮ ಕೌಟುಂಬಿಕ ಸಮಸ್ಯೆ, ವಿವಾಹ ವಿಚ್ಛೇದನೆ ಹೆಚ್ಚಳವಾ ಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿವಿಯ ಸಿಂಡಿಕೇಟ್ ಸದಸ್ಯೆ, ನ್ಯಾಯವಾದಿ ಮೀರಾ ಫಡ್ಕೆ ಹೇಳಿದ್ದಾರೆ.

ಮಹಿಳಾ ಸಮನ್ವಯ ಮಂಗಳೂರು ವಿಭಾಗ, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಸೇವಾ ಸಂಗಮ ಟ್ರಸ್ಟ್ ಸಹಯೋಗದೊಂದಿಗೆ ರವಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ನಾರೀ ಶಕ್ತಿ ಸಂಗಮ ಮಹಿಳಾ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಆಧುನಿಕ ಶಿಕ್ಷಣ ಹಣದ ಹಿಂದೆ ಓಡುವುದನ್ನು ಕಲಿಸುತ್ತಿದೆ. ಇದರಿಂದ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಹಣದಿಂದಾಗಿ ಕುಟುಂಬದ ಸುಖ ಕಣ್ಮರೆಯಾಗುತ್ತಿದೆ. ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಕೆಟ್ಟ ಪ್ರವೃತ್ತಿ ಬೆಳೆಯು ತ್ತಿದೆ. ಇದು ನಮ್ಮ ಸಂಸ್ಕೃತಿಯಲ್ಲ ಎಂದರು.

ಕೆಲವೊಂದು ಕೆಟ್ಟ ಪರಿಣಾಮ ಸಮಾಜದ ಮೇಲೆ ಬೀರುತ್ತಿದೆ. ಇದರಿಂದ ದೇಶದ ಪ್ರಗತಿಗೂ ಹಿನ್ನಡೆಯಾಗಲಿದೆ. ಪ್ರಸ್ತುತ ಎಲ್ಲ ರಂಗದಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ದೇಶ, ಸಮಾಜದ ಅಭಿವೃದ್ಧಿಗೆ ಮಹಿಳೆಯ ಪಾತ್ರ ಬಹು ಮುಖ್ಯ ವಾಗಿದೆ. ಪೋಷಕರು, ಶಿಕ್ಷಕರು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೆ ಸಂಸ್ಕಾರ, ಜವಬ್ಧಾರಿ ಹೇಳಿಕೊಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಸಮ್ಮೇಳನವನ್ನು ಮಾಹೆ ಸಿಐಎಂಆರ್ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣಾ ಕೆ.ಆಚಾರ್ಯ ಉದ್ಘಾಟಿಸಿದರು. ಸೇವಾ ಸಂಗಮ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷೆ ಸುಮತಾ ನಾಯಕ್ ಉಪಸ್ಥಿತರಿದ್ದರು.

ಮಹಿಳಾ ಸಮ್ಮೇಳನದ ವಿಭಾಗ ಸಹಸಂಚಾಲಕಿ ರೇಷ್ಮಾ ಉದಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಸುವರ್ಣ ಸ್ವಾಗತಿಸಿದರು. ಸಂಧ್ಯಾ ರಮೇಶ್ ವಂದಿಸಿದರು. ಚಂದ್ರಿಕಾ ಹಾಗೂ ಧನ್ಯಾ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಭಾರತೀಯ ಚಿಂತನೆಯಲ್ಲಿ ಮಹಿಳೆ, ಮಹಿಳಾ ಸಬಲೀಕರಣ ವಿಚಾರ ಸೇರಿದಂತೆ ಪ್ರತ್ಯೇಕ ಗುಂಪುಗಳಾಗಿ ಗೋಷ್ಠಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News